ಮಾಲಿನ್ಯ ನಿಯಂತ್ರಣಕ್ಕೆ ಪರಿಸರ ಸ್ನೇಹಿ ವಾಹನ ಬಳಕೆ ಹೆಚ್ಚಿಸಿ: ಲಕ್ಷ್ಮಣ ಸವದಿ

Update: 2020-11-18 17:25 GMT

ಬೆಂಗಳೂರು, ನ.18: ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

'ಹೊಗೆ ರಹಿತ ವಾಹನ ಸುಖೀ ಕುಟುಂಬದ ಜೀವನ' ಎಂಬ ಬರಹದ ಅಡಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ 'ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯ ಕಾಲ್ನಡಿಗೆ ಜಾಥಾ'ಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಸಂಶೋಧನೆ ಪ್ರಕಾರ ಶೇ. 42ರಷ್ಟು ಮಾಲಿನ್ಯ ವಾಹನಗಳು ಹೊರಸೂಸುವ ಹೊಗೆಯಿಂದಲೇ ಆಗುತ್ತಿದೆ ಎಂಬುದು ಆತಂಕಕಾರಿ ಸಂಗತಿ. ಕಳೆದ ವರ್ಷ ದಿಲ್ಲಿಯ ಮಾಲಿನ್ಯ ಪ್ರಮಾಣ ಅಲ್ಲಿನ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಹೀಗಾಗಿ ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಎಲ್ಲ ಇಲಾಖೆಗಳು ಒಂದಾಗಬೇಕು ಎಂದು ಸಲಹೆ ನೀಡಿದರು.

ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಕುರಿತು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇದನ್ನ ನಿಯಂತ್ರಿಸಬೇಕು ಅಂದರೆ ಹೆಚ್ಚು ಪರಿಸರ ಸ್ನೇಹಿ ವಾಹನಗಳ ಬಳಕೆ ಮಾಡಬೇಕು. ಎಲೆಕ್ಟ್ರಿಕಲ್ ಬಸ್‍ಗಳ ಖರೀದಿಗೂ ಸಬ್ಸಿಡಿ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇದರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಅಂತ ಮಾಹಿತಿ ನೀಡಿದರು.

ನಿರ್ದೇಶಕ ಪ್ರೇಮ್ ಮಾತನಾಡಿ, ಬೆಂಗಳೂರಿನಲ್ಲಿ ಕಾರು-ಬೈಕ್-ಬಸ್ ಬಿಟ್ಟು ಹೆಚ್ಚಾಗಿ ಜನರು ಸೈಕಲ್ ಬಳಕೆ ಹೆಚ್ಚು ಮಾಡಬೇಕು. ಅದರ ಜತೆಗೆ ನಗರದಲ್ಲಿ ಹೆಚ್ಚಾಗಿ ಗಿಡಗಳನ್ನು ನೆಡುವ ಕೆಲಸ ಆಗಬೇಕು. ಆಗ ವಾಯುಮಾಲಿನ್ಯ ತಡೆಗಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಬಂತಿಕಾ, ಆರ್‍ಟಿಒ ಆಯುಕ್ತ ಶಿವಕುಮಾರ್ ಸೇರಿದಂತೆ ಮತ್ತಿತರರಿದ್ದರು.

ಕನ್ನಡ ಪರ ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ. ಪ್ರಾಧಿಕಾರ ಇರುವುದು ಜನಾಂಗದ ಅಭಿವೃದ್ಧಿಗಾಗಿಯೇ ಹೊರತು, ಭಾಷಾ ಆಧಾರಿತವಾಗಿ ಮಾಡಿರುವುದಲ್ಲ. ಮರಾಠಿಗರು ಅಂದರೆ ಎಂಇಎಸ್ ಎಂಬ ಕಲ್ಪನೆ ಇದೆ. ಮರಾಠಿ ಏಕೀಕರಣ ಸಮಿತಿಯವರು ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿದ್ದರು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಮರಾಠಿ ಸಮುದಾಯವಿದ್ದು, ಬಹಳಷ್ಟು ಹಿಂದೆ ಉಳಿದಿದೆ. ಬಡತನದಲ್ಲಿ ಬೇಯುತ್ತಿದ್ದು, ಅವರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡಲಾಗಿದೆ.

-ಲಕ್ಷ್ಮಣ ಸವದಿ, ಉಪ ಮಖ್ಯಮಂತ್ರಿ ಹಾಗೂ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News