ಮುಖ್ಯಮಂತ್ರಿ ಕುಟುಂಬದಿಂದ ಎಂಪಿಎಂ ಅರಣ್ಯ ಭೂಮಿ ಖಾಸಗೀಕರಣಕ್ಕೆ ಯತ್ನ: ಕೆ.ಪಿ.ಶ್ರೀಪಾಲ್ ಆರೋಪ
ಶಿವಮೊಗ್ಗ, ನ.19: ಎಂಪಿಎಂ ಪೇಪರ್ ಕಾರ್ಖಾನೆಗೆ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಿದ್ದ ಅರಣ್ಯ ಭೂಮಿಯನ್ನು ಮುಖ್ಯಮಂತ್ರಿಯ ಕುಟುಂಬ ಖಾಸಗೀಕರಣಗೊಳಿಸಲು ಹೊರಟಿದೆ ಎಂದು ನಮ್ಮೂರಿಗೆ ಆಕೇಶಿಯಾ ಬೇಡ ಹೋರಾಟ ಸಮಿತಿಯ ಸಂಚಾಲಕ ಕೆ.ಪಿ.ಶ್ರೀಪಾಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಂಪಿಎಂಗೆ ಸೇರಿದ 33,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಖಾಸಗೀಕರಣಗೊಳಿಸಲು ಮುಖ್ಯಮಂತ್ರಿ ಕುಟುಂಬ ಹೆಚ್ಚು ಆಸಕ್ತಿ ವಹಿಸಿದೆ. ಈ ಅರಣ್ಯವನ್ನು ರಿನೀವಲ್ ಮಾಡುವುದಕ್ಕೆ ಸಂಸದ ರಾಘವೇಂದ್ರ, ಮುಖ್ಯಮಂತ್ರಿ ಹೇಳುತ್ತಿದ್ದಾರೆ ಎಂದು ಬೆಂಗಳೂರಿನ ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿ(ಸಿಸಿಎಫ್) ಮನವಿ ನೀಡಲು ಹೋದಾಗ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ತನ್ನ ಬಳಿ ಇವೆ ಎಂದು ಹೇಳಿದರು.
ಎಂಪಿಎಂ ಅರಣ್ಯ ಭೂಮಿಯನ್ನು ಖಾಸಗೀರಣಗೊಳಿಸದಂತೆ ಎಪ್ರಿಲ್ ಮೇ ತಿಂಗಳಿನಲ್ಲಿ ಸಂಸದರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ. ಎಂಪಿಎಂ ಭೂಮಿ ಖಾಸಗೀಕರಣ ಮಾಡಲು ಮುಖ್ಯಮಂತ್ರಿ ಎರಡು ಬಾರಿ ಸಭೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎಂಪಿಎಂ ಅರಣ್ಯ ಖಾಸಗೀಕರಣಗೊಳಿಸದಂತೆ ಜೀವ ವೈವಿಧ್ಯ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ. ಹೆಗಡೆ ಅಧಿಕಾರದ ಆಸೆಗಾಗಿ ಪರಿಸರ ಉಳಿಸಲು ಯಾವುದೇ ಒತ್ತಡ ಹೇರುತ್ತಿಲ್ಲ. ಅನಂತ ಹೆಗಡೆ ಆಶೀಸರ ನಿಜವಾಗಿಯೂ ಪರಿಸರವಾದಿಯಾಗಿದ್ದಾರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಪರಿಸರ ಹೋರಾಟಕ್ಕೆ ನಮ್ಮಜೊತೆ ಕೈ ಜೋಡಿಸಲಿ ಎಂದು ಕೆ.ಪಿ.ಶ್ರೀಪಾಲ್ ಸವಾಲು ಹಾಕಿದರು.
ಎಂಪಿಎಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಥ ಮಾಡುವುದರ ಮೂಲಕ ಹೋರಾಟ ಮಾಡಲಿದ್ದೇವೆ. ಎರಡನೇ ಹಂತದ ಹೋರಾಟಕ್ಕೆ ಮುಂದಾಗಿದ್ದು, ಶಿವಮೊಗ್ಗ ಸಿಸಿಎಫ್ ಕಚೇರಿ ಮುತ್ತಿಗೆ ಹಾಕಲಿದ್ದೇವೆ ಎಂದರು.
ಪ್ರೊ.ರಾಜೇಂದ್ರ ಚೆನ್ನಿ ಮಾತಾನಾಡಿ, ಎಂಪಿಎಂ ಅರಣ್ಯ ಭೂಮಿಯ ಗುತ್ತಿಗೆ ಅವದಿ ಮುಗಿದಿದೆ. ನಲವತ್ತು ವರ್ಷಗಳ ಹಿಂದೆ ಕಾರ್ಖಾನೆಯನ್ನು ಮುಂದೊಮ್ಮೆ ಖಾಸಗಿರವರಿಗೆ ನೀಡಿದರೆ ಅರಣ್ಯನ್ನು ಅರಣ್ಯ ಇಲಾಖೆಗೆ ನೀಡಬೇಕೇಂದು ಲೀಸ್ ನಲ್ಲೇ ಇದೆ. ಒಪ್ಪಂದದಂತೆ 33,000 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿ ಸಹಜ ಅರಣ್ಯ ಬೆಳೆಸಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಭೂಮಿ ಉಳಿಸಲು ಜನಾಂದೋಲನವಾಗಬೇಕಿದೆ. ಮಲೆನಾಡಿನ ಜನರು ಹೋರಾಟಕ್ಕೆ ಬೆಂಬಲ ನೀಡಬೇಕು. ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಹೋಗಿ ಅರಿವು ಮೂಡಿಸಿ ಹೋರಾಟ ರೂಪಿಸುತ್ತೇವೆ, ಇದನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತಾನಾಡಿ, ರಾಜ್ಯ ಸರಕಾರವು ಭೂಸುಧಾರಣಾ ಕಾಯ್ದೆ ಜಾರಿಗೆ ತಂದಾಗಲೇ ಗೊತ್ತಾಗಿದೆ ಇದು ಕಬಳಿಸುವ ಯೋಜನೆ ಅನ್ನುವುದು. ಅದರ ಮುಂದುವರಿದ ಭಾಗವೇ ಈ ಎಂಪಿಎಂ ಅರಣ್ಯ ಭೂಮಿ ಖಾಸಗೀಕರಣ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಗುರುಮೂರ್ತಿ, ಶೇಖರ್ ಗೌಳೇರ್, ಕೃಷ್ಣಮೂರ್ತಿ ಹಿಳ್ಳೋಡಿ, ಚೆನ್ನವೀರ್, ಬಾಲುನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.