ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ದೂರು: ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

Update: 2020-11-19 12:17 GMT

ಬೆಂಗಳೂರು, ನ.19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜನ ಸಾಮಾನ್ಯರ ಪಕ್ಷ, ತನಿಖೆಗೆ ಆದೇಶಿಸಬೇಕೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದರೆ, ಸಾಮಾಜಿಕ ಹೋರಾಟಗಾರ ಕಂಚನಹಳ್ಳಿ ರವಿಕುಮಾರ್ ಅವರು ಬಿಎಸ್‍ವೈ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.   

ಜನ ಸಾಮಾನ್ಯರ ಪಕ್ಷ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಹದಗೆಟ್ಟಿದ್ದು, ಸಚಿವರೂ ದುರ್ಬಲರಾಗಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಾವೇ ಮುಂದಿನ ಸಿಎಂ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಯಲ್ಲಪ್ಪ ಹೆಗಡೆ ಅವರು ವಿ.ಆರ್.ವಾಲಾ ಅವರಿಗೆ ಗುರುವಾರ ಸಲ್ಲಿಸಿರುವ ದೂರಿನಲ್ಲಿ ಆಪಾದಿಸಿದ್ದಾರೆ.

ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ, ಮರಾಠಾ ಅಭಿವೃದ್ಧಿ ನಿಗಮ ಹಾಗೂ ವೀರಶೈವ-ಲಿಂಗಾಯತ ನಿಗಮಗಳ ಸ್ಥಾಪನೆಯ ನಿರ್ಧಾರವೂ ವಿಜಯೇಂದ್ರ ನೀಡಿದ್ದ ಭರವಸೆಗೆ ಪೂರಕವಾಗಿ ಹೊರಬಿದ್ದಿದೆ. ಇದು ಅವರು ರಾಜ್ಯ ಸರಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ. ಬಿಎಸ್‍ವೈ ಅವರಿಂದ ರಾಜೀನಾಮೆ ಪಡೆಯಬೇಕು. 

ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿರುವ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ದೂರಿನ ಪ್ರತಿಗಳನ್ನು ಕಳುಹಿಸಿದ್ದಾರೆ.  

ವಿಚಾರಣೆಗೆ ಅನುಮತಿ ಕೋರಿ ಮನವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಹದಗೆಟ್ಟಿದೆ. ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಅವರ ಮಗ ಬಿ.ವೈ.ವಿಜಯೇಂದ್ರ ಸರಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಕಂಚನಹಳ್ಳಿ ರವಿಕುಮಾರ್, ಯಡಿಯೂರಪ್ಪ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. 

ಸರಕಾರದ ಕಡತಗಳು, ಟೆಂಡರ್ ದಾಖಲೆಗಳಿಗೆ ಯಡಿಯೂರಪ್ಪ ಬದಲಿಗೆ ಅವರೇ ಸಹಿ ಮಾಡುತ್ತಿದ್ದಾರೆ. ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರೂ.ಹಣ ಸಂಗ್ರಹಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News