ಕೋವಿಡ್ ನಿಯಮ ಉಲ್ಲಂಘನೆ: ರಾಜಕೀಯ ಪಕ್ಷಗಳನ್ನು ಪ್ರತಿವಾದಿಯಾಗಿಸಲು ಹೈಕೋರ್ಟ್ ಸೂಚನೆ

Update: 2020-11-19 12:25 GMT

ಬೆಂಗಳೂರು, ನ.19: ಕೊರೋನ ನಿಯಮಗಳನ್ನು ಗಾಳಿಗೆ ತೂರುತ್ತಿರುವ ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣದಲ್ಲಿ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ಅರ್ಜಿದಾರರಿಗೆ ಸೂಚಿಸಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಕಾರ್ಯಕ್ರಮಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ಹಾಗಿದ್ದೂ ನಿಯಮಾನುಸಾರ ಕ್ರಮ ಜರುಗಿಸುವಲ್ಲಿ ಸರಕಾರ ಕಟ್ಟುನಿಟ್ಟಾಗಿ ಕ್ರಮ ಜರುಗಿಸುತ್ತಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಿ, ಅವರಿಗೇ ನೋಟಿಸ್ ಜಾರಿ ಮಾಡುತ್ತೇವೆ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವ ಹಾಗೂ ಎಫ್‍ಐಆರ್ ದಾಖಲಿಸುವ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು. ಆದರೆ, ರಾಜ್ಯ ಸರಕಾರ ಈವರೆಗೆ ಯಾವುದೇ ಕಠಿಣ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜಕೀಯ ಪಕ್ಷಗಳನ್ನೇ ಪ್ರತಿವಾದಿಗಳನ್ನಾಗಿಸಿ ವಿಚಾರಣೆ ನಡೆಸಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News