ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ರದ್ದುಗೊಳಿಸಿದ ಹೈಕೋರ್ಟ್

Update: 2020-11-19 12:52 GMT

ಬೆಂಗಳೂರು, ನ.19: ರಾಜ್ಯದ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8ರಂದು ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ರಾಜ್ಯ ಸರಕಾರದ ಅಧಿಸೂಚನೆ ಪ್ರಶ್ನಿಸಿ ಹಾಸನ, ಅರಸೀಕೆರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಗುರುವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಈ ಆದೇಶ ನೀಡಿದೆ.
ಮೀಸಲು ನೀಡುವ ವೇಳೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ನಾಲ್ಕು ವಾರಗಳ ಒಳಗೆ ರೊಟೇಷನ್ ಪದ್ಧತಿ ಅನುಸಾರ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

ಪ್ರಕರಣವೇನು: ಮೀಸಲಾತಿ ಕಲ್ಪಿಸುವ ವೇಳೆ ರೊಟೇಷನ್ ಅನುಸರಿಸಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅ.15ರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ಹಾಗೂ ಅ.19ರಂದು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತ್ತು. ಜತೆಗೆ, ಮೀಸಲಾತಿ ಆವರ್ತನೆ ಪರಿಶೀಲಿಸಿ ಕರಡು ಸಲ್ಲಿಸಲು ಮೂವರು ವಕೀಲರನ್ನೊಳಗೊಂಡ ತ್ರಿಸದಸ್ಯ ಸಮಿತಿ ನೇಮಕ ಮಾಡಿತ್ತು.

ಏಕಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅ.19ರಂದು ಮಾನ್ಯ ಮಾಡಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ತಡೆಯಾಜ್ಞೆ ತೆರವುಗೊಳಿಸಿ, ರಾಜ್ಯದ ಎಲ್ಲ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿದ್ದ ಹೈಕೋರ್ಟ್, ಚುನಾವಣಾ ಫಲಿತಾಂಶ ಅರ್ಜಿಗಳ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಹೇಳಿದೆ.

ಇದರಿಂದ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅ.22ರಂದು ಹಿಂಪಡೆದಿದ್ದ ಏಕಸದಸ್ಯಪೀಠ, ನ.10ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರಕಾರಕ್ಕೆ ನಿರ್ದೇಶಿಸಿತ್ತು. ಇದೀಗ 4 ವಾರಗಳಲ್ಲಿ ಮರು ಅಧಿಸೂಚನೆ ಹೊರಡಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತು. ಇದೇ ವೇಳೆ ಸರಕಾರದ ಪರ ವಕೀಲರು ಈ ಆದೇಶವನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಿದ್ದು, ಅದಕ್ಕಾಗಿ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ಹೈಕೋರ್ಟ್, ಮೀಸಲಾತಿ ಅಧಿಸೂಚನೆ ರದ್ದುಪಡಿಸಿದ ಆದೇಶಕ್ಕೆ 10 ದಿನಗಳವರೆಗೆ ತಡೆಯಾಜ್ಞೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News