ಕನ್ನಡ ಸಾಹಿತ್ಯ ಪರಿಷತ್‍ ಅನ್ನು ಜನರ ಪರಿಷತ್ತನ್ನಾಗಿಸುವ ಗುರಿ ನನ್ನದು: ಮಹೇಶ್ ಜೋಶಿ

Update: 2020-11-19 13:37 GMT

ಚಿಕ್ಕಮಗಳೂರು, ನ.19: ಈ ಬಾರಿಯ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿದ್ದು, ಪರಿಷತ್ ಅಧ್ಯಕ್ಷನಾದಲ್ಲಿ ಕಸಾಪವನ್ನು ಜನರ ಪರಿಷತ್ತನ್ನಾಗಿ ರೂಪಿಸುತ್ತೇನೆ. ತಾನು ಪರಿಷತ್ ಅಧ್ಯಕ್ಷನಾದಲ್ಲಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತೇನೆ. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ಕಸಾಪ ಸದಸ್ಯರು ತನಗೆ ಅವಕಾಶ ನೀಡಬೇಕೆಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ, ನಾಡೋಜ ಡಾ.ಮಹೇಶ್ ಜೋಶಿ ಮನವಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದರ್ಶನ ಕೇಂದ್ರದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ದೂರದರ್ಶನವನ್ನು ಸಮೀಪ ದರ್ಶನವನ್ನಾಗಿ ರೂಪಿಸಿದ್ದೇನೆ. ದೂರದರ್ಶನವು ವೀಕ್ಷಕರಿಂದ, ಕಲಾವಿದರಿಂದ ದೂರವಾದಾಗ ದೂರದರ್ಶನವು ಕಲಾವಿದರನ್ನು ಹುಡುಕಿಕೊಂಡು ಹೋಗುವಂತೆ ಮಾಡಿದ್ದೇನೆ. ಇದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಸಾಕಷ್ಟು ಸುಧಾರಣೆ ಮಾಡಲು ಯೋಜನೆ ರೂಪಿಸಿಕೊಂಡಿದ್ದೇನೆ ಎಂದರು.

ಚುನಾವಣೆಯಲ್ಲಿ ಗೆದ್ದು ಸಾಹಿತ್ಯ ಪರಿಷತ್ ಅಧ್ಯಕ್ಷನಾದಲ್ಲಿ 5 ವರ್ಷಗಳ ಅವಧಿಯಲ್ಲಿ ಕಾಫಿನಾಡಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಪ್ರಸಕ್ತ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಕನ್ನಡಾಭಿಮಾನಿಗಳಿಗೆ ಇದರ ಮಾಹಿತಿ ಕೊರತೆ ಇಲ್ಲವಾಗಿದೆ. ಇದನ್ನು ನಿವಾರಿಸಲು ಆನ್‍ಲೈನ್‍ನಲ್ಲಿ ಸದಸ್ಯತ್ವ ಅಭಿಯಾನ ರೂಪಿಸಲಾಗುವುದು ಎಂದರು. 

ಸಾಹಿತ್ಯ ಪರಿಷತ್ 3 ಲಕ್ಷ 20 ಸಾವಿರ ಮತದಾರರನ್ನು ಹೊಂದಿದ್ದು, ಅವರ ಮಾಹಿತಿ ಅಪೂರ್ಣವಾಗಿದೆ. ತಾವು ಅಧ್ಯಕ್ಷರಾಗುತ್ತಿದ್ದಂತೆ ಇವೆಲ್ಲವನ್ನು ಪರಿಷ್ಕರಿಸಿ ಸುಧಾರಣೆ ತರಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಕೃಪಕಟಾಕ್ಷವಿಲ್ಲದೇ ತಾಲೂಕು ಅಧ್ಯಕ್ಷರಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ಅಧ್ಯಕ್ಷರ ಆಯ್ಕೆ ವಿಧಾನದಲ್ಲಿ ಬದಲಾವಣೆ ತರಲಾಗುವುದು ಎಂದು ಮಾಹಿತಿ ನೀಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಹೊಸ ಮನ್ವಂತರದೊಂದಿಗೆ ಕನ್ನಡದ ಆಸ್ಮಿತೆಯನ್ನು ಗಟ್ಟಿಗೊಳಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬದಲಾವಣೆಗೆ ನಾಂದಿ ಹಾಡಲಾಗುವುದು ಎಂದರು.

ರಾಜ್ಯದ 7ಲಕ್ಷ ಕನ್ನಡಿಗರಲ್ಲಿ ಕನ್ನಡ ಸಾಹಿತ್ಯ ಪರಿಷತ್ 3ಲಕ್ಷ 20ಸಾವಿರ ಸದಸ್ಯರನ್ನು ಮಾತ್ರ ಒಳಗೊಂಡಿದೆ. ಪರಿಷತ್ ಸದಸ್ಯತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಅಭಿಯಾನ ಪ್ರಾರಂಭಿಸಿ ಸದಸ್ಯತ್ವ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ದೂರದರ್ಶನ ಸಮೀಪ ದರ್ಶನವಾದಂತೆ ಮುಂದೇ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವ ಧ್ಯೇಯೆ ಹೊಂದಿದ್ದು, 2021ರಲ್ಲಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಜೋಷಿ ಇದೇ ವೇಳೆ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಸ್ವತಂತ್ರ ಸಂಸ್ಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಕೈಗೊಂಬೆಯಲ್ಲ, ಆದರೆ ಅದು ಸರಕಾರದೊಂದಿಗೆ ಸೌರ್ಹಾದಯುತ ಸಂಪರ್ಕ ಹೊಂದಿರಬೇಕು. ಸಾಹಿತ್ಯ ಪರಿಷತ್ ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಅನೇಕ ವಿಭಾಗ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್ ಶುದ್ಧೀಕರಣ, ಸರಳೀಕರಣ ಆಗಬೇಕಾದ ಅಗತ್ಯವಿದೆ ಎಂದರು

ಸುದ್ದಿಗೋಷ್ಟಿಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಎಲ್.ವಿ.ಕೃಷ್ಣಮೂರ್ತಿ, ರಾಜಕುಮಾರ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಓಂಕಾರೇಗೌಡ, ರಾಮಲಿಂಗಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News