×
Ad

ಗ್ರಾಹಕರ ಮನೆ ಬಾಗಿಲಿಗೇ 'ತಾಜಾ ಮೀನು' ಯೋಜನೆ ಶೀಘ್ರ ಜಾರಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-11-19 19:59 IST

ಬೆಂಗಳೂರು, ನ. 19: ಕರ್ನಾಟಕ ರಾಜ್ಯ ಮೀನುಗಾರಿಕೆ ಇಲಾಖೆಯಿಂದ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮೀನು ಪೂರೈಕೆ ಮಾಡುವ ನೂತನ ಯೋಜನೆಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು. ಆನ್‍ಲೈನ್ ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಾಜಾ ಮೀನು ಒದಗಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 21ಕ್ಕೆ ನೂತನ ‘ಮತ್ಸ್ಯ ಸಂಪದ ಯೋಜನೆ’ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಕಾರ್ಯಾಗಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಒಳನಾಡು ಮೀನುಗಾರಿಕೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ 9ನೇ ಸ್ಥಾನದಲ್ಲಿದೆ. ಸಮುದ್ರ ಕಿನಾರೆ ಮೀನುಗಾರಿಕೆಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಇದರಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನಕ್ಕೆ ಬರುವ ಗುರಿಯನ್ನು ಹೊಂದಲಾಗಿದೆ ಎಂದ ಅವರು, ನ.21ರಂದು ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಮೀನಿನ ಚಿಪ್ಸ್ ಸೇರಿದಂತೆ ಇನ್ನಿತರ ಖಾದ್ಯಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ವಿಶ್ವ ವಿದ್ಯಾಲಯ: ಮಂಗಳೂರು ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕಾ ವಿಶ್ವ ವಿದ್ಯಾಲಯವನ್ನಾಗಿ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವ ನಿರೀಕ್ಷೆ ಇದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಂಗಳೂರು ಮೀನುಗಾರಿಕಾ ವಿಶ್ವ ವಿದ್ಯಾಲಯದ ಜೊತೆಗೆ ರಾಜ್ಯದಲ್ಲಿನ ಶಿವಮೊಗ್ಗ, ಉಡುಪಿ, ಕಾರವಾರದ ಅಂಕೋಲ ಹಾಗೂ ಮೈಸೂರಿನಲ್ಲಿ ನೂತನವಾಗಿ ಮೀನುಗಾರಿಕಾ ಕಾಲೇಜನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದ ಅವರು, ಅದೇ ರೀತಿಯಲ್ಲಿ ರಾಜ್ಯದ ಹತ್ತು ಕಡೆಗಳಲ್ಲಿ ಮೀನುಗಾರಿಕೆ ಸಂಬಂಧಿಸಿದ ಡಿಪ್ಲೊಮಾ ತರಗತಿ ಪ್ರಾರಂಭಿಸಲಾಗುವುದು ಎಂದರು.

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಮೀನು ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ವಿದೇಶದ ಬಣ್ಣದ ಮೀನುಗಳ ಸಾಕಾಣಿಕೆಯನ್ನು ಮಾಡಲಾಗುವುದು ಎಂದ ಅವರು, ಮೀನುಗಳನ್ನು ವಿದೇಶದಿಂದ ಆಮದು ಮಾಡಿ ಅವುಗಳನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗಮುಕ್ತವೆಂದು ನಿರ್ಧರಿಸಿದ ನಂತರ ಸಾಕಾಣೆ ಮಾಡಲಾಗುವುದು ಎಂದರು.

ಮೀನು ಕ್ವಾರಂಟೈನ್ ವ್ಯವಸ್ಥೆ ತಮಿಳುನಾಡಿನ ಚೆನ್ನೈನಲ್ಲಿದ್ದು, ಇದೀಗ ರಾಜ್ಯದಲ್ಲಿಯೂ ಆರಂಭಿಸಲಾಗುತ್ತಿದೆ. 2020-21ನೇ ಸಾಲಿಗೆ ರಾಜ್ಯಕ್ಕೆ 137.20 ಕೋಟಿ ರೂ.ಯೋಜನೆಗಳಿಗೆ ಕೇಂದ್ರ ಮಂಜೂರಾತಿ ನೀಡಿದ್ದು, ಇದರ ಅನುಷ್ಠಾನಕ್ಕೆ ಇಲಾಖೆ ಕ್ರಮ ವಹಿಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಒಟ್ಟು 4,115 ಕೋಟಿ ರೂ.ಗಳನ್ನು ಒದಗಿಸಲು ಕೋರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದ ಅವರು, ಆತ್ಮನಿರ್ಭರ ಯೋಜನೆಯಡಿ ಸುಮಾರು 10 ಸಾವಿರ ಯುವಕರಿಗೆ ಇಲಾಖೆಯಿಂದ ವಿವಿಧೆಡೆಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News