ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಸಿಬಿ ಬಲೆಗೆ

Update: 2020-11-19 17:55 GMT

ಬಾಗಲಕೋಟೆ, ನ.19: ಯೋಜನೆಯೊಂದರ ಫಲಾನುಭವಿಗೆ 10 ಲಕ್ಷ ರೂ. ಸಹಾಯಧನ ಬಿಡುಗಡೆಗೆ 25 ಸಾವಿರ ರೂ.ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಪ್ರಭಾರಿ ಜಿಲ್ಲಾ ವ್ಯವಸ್ಥಾಪಕ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಿಗಮದ ಪ್ರಭಾರಿ ವ್ಯವಸ್ಥಾಪಕ ಶಿವಾನಂದ ಮಹಾಂತಪ್ಪ ನಾಗನೂರ ಎಂಬುವರ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ.

ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ಸದಸ್ಯರೊಬ್ಬರಿಗೆ ನಿಗಮದ ಸಮೃದ್ಧಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಫ್ರಾಂಚೈಸಿ ಮಳಿಗೆ ತೆರೆಯಲು 10 ಲಕ್ಷ ಸಹಾಯಧನ ಮಂಜೂರಾಗಿತ್ತು. ಅದನ್ನು ಬಿಡುಗಡೆ ಮಾಡಲು ನಿಗಮದ ಪ್ರಭಾರಿ ವ್ಯವಸ್ಥಾಪಕ ಶಿವಾನಂದ ಮಹಾಂತಪ್ಪ ನಾಗನೂರ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಸಹಾಯಧನದಲ್ಲಿ 5 ಲಕ್ಷ ಮೊತ್ತದ ಚೆಕ್ ಸ್ವೀಕರಿಸಲು ರವೀಂದ್ರ ಮುಂದಾದಾಗ ಶಿವಾನಂದ ಮಹಾಂತಪ್ಪ ನಾಗನೂರ ಲಂಚದ ಮೊತ್ತದಲ್ಲಿ ಮೊದಲ ಕಂತಾಗಿ 10 ಸಾವಿರ ಪಡೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಎಸಿಬಿ ಡಿವೈಎಸ್ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News