ಸಿ.ಟಿ. ರವಿ ಜೆಎನ್‍ಯು ಹೆಸರು ಬದಲಾಯಿಸುವ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ : ಬ್ಲಾಕ್ ಕಾಂಗ್ರೆಸ್ ಟೀಕೆ

Update: 2020-11-20 11:08 GMT

ಚಿಕ್ಕಮಗಳೂರು, ನ.20: ಬಿಜೆಪಿ ಪಕ್ಷದ ಮುಖಂಡರಿಗೆ ವಿವಾದ ಸೃಷ್ಟಿಸಿ ಪ್ರಚಾರ ಪಡೆಯುವುದು ಚಾಳಿಯಾಗಿದೆ. ಜೆಎನ್‍ಯು ವಿವಿಯ ಹೆಸರನ್ನು ಸ್ವಾಮಿ ವಿವೇಕಾನಂದ ವಿವಿ ಎಂದು ಬದಲಾಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿಯವರಿಗೆ ತಾಕತ್ತಿದ್ದಲ್ಲಿ ಜೆಎನ್‍ಯು ನಂತಹ ವಿವಿಗಳನ್ನು ಸ್ಥಾಪನೆ ಮಾಡಿ ಅದಕ್ಕೆ ಯಾರ ಹೆಸರನ್ನಾದರೂ ಇಟ್ಟುಕೊಳ್ಳಲಿ, ಆದರೆ ಸಿ.ಟಿ. ರವಿ ಸೇರಿದಂತೆ ಬಿಜೆಪಿಯವರು ಯಾರದ್ದೋ ಮಕ್ಕಳಿಗೆ ನಾಮಕರಣ ಮಾಡುವಂತಹ ಮನಸ್ಥಿತಿಯಿಂದ ಹೊರ ಬರಬೇಕೆಂದು ಬ್ಲಾಕ್ ಕಾಂಗ್ರೆಸ್ ವಕ್ತಾರ, ನಗರಸಭೆ ಮಾಜಿ ಸದಸ್ಯ ರೂಬೆನ್ ಮೊಸೆಸ್ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಮುಖಂಡರಿಗೆ ವಿವಾದಾತ್ಮಕ ಹೇಳಿಕೆ ನೀಡುವುದು ಚಾಳಿಯಾ ಗಿದೆ. ಅವಹೇಳನಕಾರಿಯಾಗಿ ಮಾತನಾಡಿದವರನ್ನು ಹೀರೋಗಳಾಗಿ ಮಾಡುವಂತಹ ಕೆಟ್ಟ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಟೀಕಿಸಿದ ಅವರು, 1969ರಲ್ಲಿ ಸ್ಥಾಪನೆಯಾದ ಜವಾಹರ್‍ಲಾಲ್ ನೆಹರು ಯೂನಿವರ್ಸಿಟಿ ಸದ್ಯ ದೇಶದ ಪ್ರತಿಷ್ಠಿಯ ವಿವಿಯಾಗಿ ಹೊರ ಹೊಮ್ಮಿದೆ. ಈ ವಿವಿಯಲ್ಲಿ ಓದಿದವರು ಪ್ರಪಂಚ ಮೂಲೆ ಮೂಲೆಯಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತ ದೇಶಕ್ಕೆ ಗೌರವ ತರುತ್ತಿದ್ದಾರೆ. ದೇಶದಲ್ಲೇ ಅತ್ಯಂತ ವಿಶಿಷ್ಟವೂ, ವೈವಿಧ್ಯ ಶಿಕ್ಷಣಕ್ಕೆ ಹೆಸರಾಗಿರುವ ಜೆಎನ್‍ಯು ವಿವಿಯ ಹೆಸರನ್ನು ಸ್ವಾಮಿ ವಿವೇಕಾನಂದ ವಿವಿ ಎಂದು ಬದಲಾಯಿಸಬೇಕೆಂದು ಸಿ.ಟಿ.ರವಿ ಇತ್ತೀಚೆಗೆ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರು ಪ್ರಚಾರ ಪ್ರಿಯರಾಗಿದ್ದು, ಬೇಗನೇ ಜನಪ್ರಿಯರಾಗಲು ಬಿಜೆಪಿ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಸ್ವಾಮಿ ವಿವೇಕಾನಂದ ಅವರ ಬಗ್ಗೆ ಸಿ.ಟಿ.ರವಿ ಹಾಗೂ ಬಿಜೆಪಿ ಮುಖಂಡರಿಗೆ ಕಿಂಚಿತ್ ಗೌರವವಿಲ್ಲ ಎಂದ ಅವರು, ಚಿಕ್ಕಮಗಳೂರು ನಗರದ ಬಸವನಹಳ್ಳಕೆರೆಯ ಮಧ್ಯೆ ಸ್ವಾಮಿ ವಿವೇಕಾನಂದ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಿ ಹೇಳಿಕೊಂಡು ಸಿ.ಟಿ.ರವಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ದಾನಿಗಳು, ಸಾರ್ವಜನಿಕರಿಂದ ಲಕ್ಷಾಂತರ ರೂ. ದೇಣಿಗೆ ಸಂಗ್ರಹ ಮಾಡಿ, ಸ್ವಾಮಿ ವಿವೇಕಾನಂದ ಅವರ ಮೂರ್ತಿಯನ್ನು ಕೊಳಚೆ ನೀರಿನ ಮಧ್ಯೆ ನಿರ್ಮಾಣ ಮಾಡಿದ್ದರು. ಆದರೆ ವಿವೇಕಾನಂದ ಮೂರ್ತಿಯ ಮುಖವನ್ನು ವಿರೂಪಗೊಳಿಸಿ ಅವರಿಗೆ ಅವಮಾನ ಮಾಡಿದ್ದರು. ಇದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾದ ಮೇಲೆ ರಾತ್ರೋರಾತ್ರಿ ಮೂರ್ತಿಯನ್ನು ಕಡೆವಿ ಜಲಸಮಾಧಿ ಮಾಡಲಾಗಿದೆ. ಮೂರ್ತಿ ನಿರ್ಮಾಣಕ್ಕಾಗಿ ದಾನಿಗಳಿಂದ ಸಂಗ್ರಹಿಸಿದ ಹಣ ಲೂಟಿ ಮಾಡಲಾಗಿದ್ದು, ಇದು ಬಿಜೆಪಿಯವರಿಗೆ ಸ್ವಾಮಿ ವಿವೇಕಾನಂದ ಅವರ ಮೇಲಿರುವ ಗೌರವಕ್ಕೆ ಸಾಕ್ಷಿಯಾಗಿದೆ. ಮೂರ್ತಿ ನಿರ್ಮಾಣಕ್ಕೆ ಸಂಗ್ರಹಿಸಿದ ಹಣದ ಲೆಕ್ಕವನ್ನು ಸಿ.ಟಿ.ರವಿ ಸಾರ್ವಜನಿಕರ ಮುಂದಿಡಬೇಕೆಂದು ರೂಬಿನ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಅಮೀನ್, ನೂರ್ ಅಹ್ಮದ್, ಗಂಗಾಧರ್, ಸುದೀಪ್, ಪಿಂಟೋ ಉಪಸ್ಥಿತರಿದ್ದರು.

''ಬಿಜೆಪಿ ಪಕ್ಷಕ್ಕೆ ದಲಿತರು, ಶೋಷಿತರು, ಮಹಿಳೆಯರು ಹಾಗೂ ಸಂವಿಧಾನದ ಮೇಲೆ ಕಿಂಚಿತ್ ಗೌರವ ಇಲ್ಲ ಎಂಬುದನ್ನು ಇಲ್ಲಿನ ಜಿಪಂ ಅಧ್ಯಕ್ಷೆಯಾಗಿರುವ ದಲಿತ ಸಮುದಾಯದ ಮಹಿಳೆಗೆ ರಾಜೀನಾಮೆ ನೀಡುವಂತೆ ಕಿರುಕುಳ ನೀಡಿರುವುದೇ ಸಾಕ್ಷಿಯಾಗಿದೆ. ಪಕ್ಷದ ಆಂತರಿಕ ವಿಚಾರಕ್ಕೆ ಸರಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವ ಜಿಲ್ಲೆಯ ಬಿಜೆಪಿ ಮುಖಂಡರು  ಜಿಪಂ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ಮೀಸಲಾಗಿವುದನ್ನು ಸಹಿಸದೇ ಹಿಂಬಾಗಿಲ ಮೂಲಕ ದಲಿತರ ಅಧಿಕಾರ ಕಿತ್ತುಕೊಳ್ಳುವ, ದಲಿತ ಮಹಿಳೆಯ ತೇಜೋವಧೆ ಮಾಡುವ ಹುನ್ನಾರ ನಡೆಸಿದ್ದಾರೆ''. 
- ರೂಬೆನ್ ಮೊಸೆಸ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News