×
Ad

ಡ್ರಗ್ಸ್ ದಂಧೆ ಪ್ರಕರಣದ ಆರೋಪಿ ನಟಿ ರಾಗಿಣಿ ವಿರುದ್ಧ ಮತ್ತೊಂದು ಪ್ರಕರಣ ?

Update: 2020-11-20 17:11 IST

ಬೆಂಗಳೂರು, ನ.20: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಬಂಧನವಾಗಿರುವ ಸಿನೆಮಾ ನಟಿ ರಾಗಿಣಿ ದ್ವಿವೇದಿ ವಿರುದ್ಧ ಈಗ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ಈಗಾಗಲೇ ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಠಾಣಾ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಬಾಣಸವಾಡಿ ಪೊಲೀಸ್ ಠಾಣೆಯ ಪ್ರಕರಣದಲ್ಲೂ ರಾಗಿಣಿ ಆರೋಪಿಯೆಂದು ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಪ್ರಕರಣಕ್ಕೆ ಬೇಕಾದ ಸಾಕ್ಷಿಗಳು, ಬಂಧಿತ ಆರೋಪಿಗಳ ಹೇಳಿಕೆ ಎಲ್ಲವನ್ನೂ ಪೊಲೀಸರು ಸಂಗ್ರಹಿಸಿದ್ದು, ಸಿಸಿಬಿ ಪೊಲೀಸರು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಬಾಣಸವಾಡಿ ಠಾಣೆ ಪ್ರಕರಣ ಸಂಬಂಧ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?: 2018 ಸಾಲಿನಲ್ಲಿ ಮಾದಕ ವಸ್ತುಗಳ ಆರೋಪ ಸಂಬಂಧ ಬಾಣಸವಾಡಿ ಠಾಣೆಯ ಪೊಲೀಸರು ಪ್ರತೀಕ್ ಶೆಟ್ಟಿ ಎಂಬಾತನನ್ನು ಬಂಧಿಸಿ ಈತನೊಂದಿಗೆ ನೈಜೀರಿಯನ್ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.

ಇದಾದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಪ್ರತೀಕ್, ಮತ್ತೆ ತನ್ನ ದಂಧೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಇತ್ತೀಚೆಗೆ ಕಾಟನ್ ಪೇಟೆ ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಶಂಕರ್ ಅನ್ನು ವಿಚಾರಣೆ ನಡೆಸಿದಾಗ ಮೊದಲನೇ ಆರೋಪಿ ಪ್ರತೀಕ್ ಸಹ ರಾಗಿಣಿ ಆಪ್ತ ರವಿಶಂಕರ್ ಸಹಚರ ಎಂಬುದು ಬೆಳಕಿಗೆ ಬಂದಿತ್ತು.

ಹೀಗಾಗಿ ಪ್ರತೀಕ್‍ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಈತನೊಂದಿಗೆ ಆದಿತ್ಯ ಅಗರ್‍ವಾಲ್‍ನನ್ನು ಬಂಧಿಸಿದ್ದರು. ಆದಿತ್ಯ ಹಾಗೂ ವಿರೇನ್ ಖನ್ನಾ ಬಗ್ಗೆ ತೀವ್ರ ತನಿಖೆ ನಡೆಸಿದಾಗ ಹಲವು ದಿನಗಳಿಂದ ರಾಗಿಣಿ ಹಾಗೂ ರವಿಶಂಕರ್ ಬಹಳ ಆತ್ಮೀಯರು ಎಂಬ ವಿಚಾರವನ್ನು ಪ್ರತೀಕ್ ಬಾಯಿಬಿಟ್ಟಿದ್ದ. ಹೀಗೆ, ಹತ್ತಾರು ಮಾಹಿತಿಗಳು ಹೊರಬಂದಿದ್ದು, ಪ್ರಮುಖ ಆರೋಪಿಗಳೊಂದಿಗೆ ನಟಿ ರಾಗಿಣಿ ದ್ವಿವೇದಿ ನಂಟಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News