ಸಿದ್ದರಾಮಯ್ಯರನ್ನು ಆರೆಸ್ಸೆಸ್ ಶಾಖೆಗೆ ಆಹ್ವಾನಿಸಿದ ಸಿ.ಟಿ.ರವಿ

Update: 2020-11-20 17:00 GMT

ಬೆಂಗಳೂರು, ನ. 20: ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಮಸೂದೆ ಜಾರಿಗೆ ಬರಬೇಕೆಂಬ ಜನರ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಅದೇ ರೀತಿಯಲ್ಲಿ ಲವ್ ಜಿಹಾದ್ ತಡೆಗಟ್ಟಲು ಕಾನೂನು ರೂಪಿಸುವ ಅಗತ್ಯವಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಪ್ರತಿಪಾದಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಮಸೂದೆಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಲು ಮತ್ತು ಡಿಸೆಂಬರ್ 7ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆಗೆ ಕ್ರಮ ಕೈಗೊಳ್ಳಬೇಕೆಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್‍ಗೆ ಮನವಿ ಮಾಡಲಾಗಿದೆ ಎಂದರು.

ಪ್ರೀತಿ ಹೆಸರಿನಲ್ಲಿ ನಡೆಯುವ ಲವ್ ಜಿಹಾದ್ ನಿಷೇಧಿಸಬೇಕು. ಕಾನೂನು ಜಾರಿಗೆ ಕೋಟ್ ಸಮ್ಮತಿಸಿದೆ. ಹೀಗಾಗಿ ರಾಜ್ಯದಲ್ಲಿ ಗೋಹತ್ಯೆ ತಡೆಗೆ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂದ ಸಿ.ಟಿ.ರವಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕಾನೂನು ಜಾರಿಗೆ ವಿರೋಧಿಸಬಾರದು ಎಂದರು.

ಇನ್ನೂ ನಿಗದಿಯಾಗಿಲ್ಲ: ತಮಿಳುನಾಡಿಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಆದರ್ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗುವ ಬಗ್ಗೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಾಖೆಗೆ ಬನ್ನಿ: ಆರೆಸ್ಸೆಸ್ ಶಾಖೆಗೆ ಖುದ್ದು ಭೇಟಿ ನೀಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿದುಕೊಳ್ಳಬೇಕು ಎಂದು ಆಹ್ವಾನಿಸಿದ ಸಿ.ಟಿ.ರವಿ, ಆರೆಸ್ಸೆಸ್ ಜಾತಿ ಸಂಘಟನೆಯಲ್ಲ. ದೇಶಕ್ಕಾಗಿ ಕೆಲಸ ಮಾಡುವ ಸಂಘಟನೆಯಾಗಿದ್ದು, ಎಲ್ಲ ಸಮುದಾಯವನ್ನು ಗೌರವಿಸುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಪಕ್ಷದ ವರಿಷ್ಟರೊಂದಿಗೆ ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ಕ್ರಮ ವಹಿಸಲಿದ್ದಾರೆ. ಈ ವಿಚಾರದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕೇ ಹೊರತು ಹೊರಗೆ ಮಾತನಾಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸುವುದು ಸರಿಯಲ್ಲ ಎಂದು ರವಿ ಭಿನ್ನ ಶಾಸಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

'ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ನಿಷೇಧಕ್ಕೆ ಬಿಜೆಪಿ ಬದ್ಧ. ಈ ಸಂಬಂಧ ಕಾನೂನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಆರಂಭದಿಂದಲೂ ಎಸ್‍ಡಿಪಿಐ ಮತ್ತು ಪಿಎಫ್‍ಐ ಚಟುವಟಿಕೆಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಮಾತ್ರವಲ್ಲ ಹೋರಾಟವನ್ನು ಮಾಡುತ್ತಿದೆ. ಹೀಗಾಗಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ'

-ಸಿ.ಟಿ.ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News