ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ, ಪುನರಾಚನೆ ಗೊಂದಲಕ್ಕೆ ತೆರೆ: ಸಿಎಂ ಯಡಿಯೂರಪ್ಪ

Update: 2020-11-20 13:38 GMT

ಬೆಂಗಳೂರು, ನ. 20: ಇನ್ನೂ ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರಾಚನೆಯೋ ಎಂಬ ಗೊಂದಲಕ್ಕೆ ಉತ್ತರ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಎರಡರಲ್ಲಿ ಒಂದಂತೂ ನಿಶ್ಚಿತ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಶೀಘ್ರದಲ್ಲೆ ನಿಗದಿಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು.

ಯಾವ ಯಾವ ಸಚಿವರು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು, ಇನ್ಯಾರನ್ನು ಕೈಬಿಡಬೇಕು ಎಂಬುದು ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ. ಎರಡು-ಮೂರು ದಿನದೊಳಗೆ ಈ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ಎಲ್ಲವೂ ಸಕಾರಾತ್ಮಕವಾಗಿ ನಡೆದಿದೆ. ಎರಡು ದಿನದಲ್ಲಿ ಕೇಂದ್ರದಿಂದ ಪಟ್ಟಿ ಬರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೆಲ ಶಾಸಕರು ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು ಅವರನ್ನು ಭೇಟಿ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶಾಸಕರು ಪಕ್ಷದ ಅಧ್ಯಕ್ಷರನ್ನು ಭೇಟಿಯಾದರೆ ತಪ್ಪೇನಿಲ್ಲ. ಎಲ್ಲರೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News