ಆರೋಗ್ಯ ಸೇವೆ ಕೈಗೆಟುಕುವ ದರದಲ್ಲಿ ಒದಗಿಸುವುದು ಸರಕಾರದ ಗುರಿ: ಸಿಎಂ ಯಡಿಯೂರಪ್ಪ

Update: 2020-11-20 13:42 GMT

ಬೆಂಗಳೂರು, ನ.20: ರಾಜ್ಯದ ಜನತೆಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ನಮ್ಮ ಸರಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಕೆಎಚ್‍ಬಿ ಕಾಲನಿಯಲ್ಲಿ ಕರ್ನಾಟಕ ಹೋಮಿಯೋಪತಿ ಮಂಡಳಿಯ ನೂತನ ಆಡಳಿತ ಕಚೇರಿ ಹೋಮಿಯೋ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಹೋಮಿಯೋಪತಿ ಚಿಕಿತ್ಸಾ ವಿಧಾನವು ಜಗತ್ತಿನಲ್ಲಿ ಜನಪ್ರಿಯಗೊಳ್ಳುತ್ತಿದೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲೂ ಹೋಮಿಯೋಪತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲಾಗುವುದೆಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆ, ಅಧ್ಯಯನಗಳನ್ನು ನಡೆಸಿ ಅದನ್ನು ದಾಖಲಾಗಿಸಬೇಕು. ಆ ಮೂಲಕ ಹೋಮಿಯೋಪತಿ ವೈದ್ಯ ಪದ್ಧತಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡಬೇಕೆಂದು ತಿಳಿಸಿದರು.

ಕೋವಿಡ್ ಸಮಯದಲ್ಲಿ ಬಹಳ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸರಕಾರಿ ಹೋಮಿಯೋಪತಿ ಆಸ್ಪತ್ರೆಗಳಿಗೆ ಹೋಗಿ ಔಷಧಿ ಪಡೆದಿದ್ದಾರೆ. ಈ ರೀತಿ ಜನರು ಹೋಮಿಯೋಪತಿ ಕಡೆ ಆಸಕ್ತಿ ತೋರಿದ್ದಾರೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಅಲೋಪತಿ ಮಾತ್ರವಲ್ಲದೆ, ಯುನಾನಿ, ಆಯುರ್ವೇದ, ಹೋಮಿಯೋಪತಿಗೂ ಬೇಡಿಕೆ ಹೆಚ್ಚಿದೆ. ಇಂತಹ ಸಮಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿರುವವರು ಹೆಚ್ಚು ಸಂಶೋಧನೆಗಳನ್ನು ನಡೆಸಿ, ಅದನ್ನು ಜನರಿಗೆ ತಿಳಿಸಬೇಕೆಂದು ಅವರು ಆಶಿಸಿದರು.

ಹೋಮಿಯೋಪತಿಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ರೋಗ ನಿರೋಧಕ ಶಕ್ತಿ ವೃದ್ಧಿಸಲು ಈ ಪದ್ಧತಿ ಪೂರಕವಾಗಿದೆ. ಆದರೆ, ಈ ಪದ್ಧತಿ ಬಹಳ ಸರಳ, ಸಲೀಸಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಜನರಲ್ಲಿ ನಂಬಿಕೆ ಕಡಿಮೆಯಾಗಿದೆ. ಇಂತಹ ಮನಸ್ಥಿತಿಯಿಂದ ಜನತೆ ಹೊರ ಬರಬೇಕು. ರಾಜ್ಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುವ 15 ಸಾವಿರ ವೈದ್ಯರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್‍ ಕುಮಾರ್, ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ, ಆರೋಗ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೆದ್‍ಅಖ್ತರ್ ಮತ್ತಿತರರಿದ್ದರು.

ತೆಲಂಗಾಣದಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆಗೆ ಹಣ ಪಡೆಯಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಕಳೆದ 9 ತಿಂಗಳಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಸರಕಾರದ ಶಿಫಾರಸು ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News