ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೆಲಸದಲ್ಲಿ ತೊಡಗಿದೆ: ಸತೀಶ್ ಜಾರಕಿಹೊಳಿ

Update: 2020-11-20 14:06 GMT

ಬೆಳಗಾವಿ, ನ.20: ಸರಕಾರವು ಚುನಾವಣಾ ತಂತ್ರವಾಗಿ ಮರಾಠ ಅಭಿವೃದ್ಧಿ ಮಾಡಿದೆ. ನಿಗಮ, ಪ್ರಾಧಿಕಾರಗಳನ್ನು ಮಾಡುವ ಬದಲು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಗೋಕಾಕ್ ನಗರದ ಹಿಲ್ ಗಾರ್ಡನ್ ನಿವಾಸ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿ ಇರಲ್ಲ. ಭಾರತದಲ್ಲಿ 5 ರಿಂದ 6 ಸಾವಿರ ಜಾತಿಗಳಿವೆ. ಎಲ್ಲಾ ಜಾತಿಗಳಿಗೆ ಬಿಜೆಪಿಯು ನಿಗಮ, ಪ್ರಾಧಿಕಾರ ಮಾಡುವ ಮುಖಾಂತರ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಲು ಹೊರಟಿದೆ ಎಂದು ದೂರಿದರು.

ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನವಾಗಿದೆ. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ಬಿಜೆಪಿ ಸರಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಆರೋಪಿಸಿದರು.

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಅಜಿತ್ ಪವಾರ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ. ಗಡಿ ಭಾಗದಲ್ಲಿ ಹಾಗೂ ರಾಜ್ಯಾದ್ಯಂತ ಇರುವ ಕನ್ನಡ ಮತ್ತು ಮರಾಠಿಯ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ ಎಂದರು.

ಬೆಳಗಾವಿಯಲ್ಲಿ ಅಧಿವೇಶನ ಮಾಡಿದರೆ ಅಭಿವೃದ್ಧಿಯಲ್ಲಿ ವಿಫಲವಾಗಿರುವ ಬಿಜೆಪಿ ಸರಕಾರ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಆದುದರಿಂದ ಅವರು ಅಧಿವೇಶನವನ್ನು ಬೆಂಗಳೂರಿಗೆ ಸೀಮಿತ ಮಾಡಿಕೊಂಡಿದ್ದಾರೆ ಎಂದರು.

ದೇಶದ ವಿವಿಧೆಡೆ ಕಾಂಗ್ರೆಸ್ ಸೋಲು ಕುರಿತಂತೆ, ಚುನಾವಣೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಇನ್ನೂ ಹೆಚ್ಚಾಗಿ ಬಲಗೊಳಿಸುವಲ್ಲಿ ಸಕ್ರಿಯವಾಗಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಪಕ್ಷವನ್ನು ಬಲಪಡಿಸಲು ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿಯು ಹಣ ಬಲದಿಂದ ಚುನಾವಣೆ ಗೆದ್ದಿದೆ. ಆದರೆ ಕಾಂಗ್ರೆಸ್ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದೆ ಎಂದು ಸತೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News