×
Ad

ಮರಾಠ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ: ಸಿಎಂಗೆ ಬಿಜೆಪಿ ಶಾಸಕ ಯತ್ನಾಳ್ ಎಚ್ಚರಿಕೆ

Update: 2020-11-20 20:03 IST

ಬೆಂಗಳೂರು, ನ.20: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಒಕ್ಕೂಟಗಳು ಡಿ.5ರಂದು ನೀಡಿರುವ ಬಂದ್ ಕರೆಗೆ ಕೇಂದ್ರ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಹೋರಾಟಗಾರರಿಗೆ, ರೋಲ್‍ಕಾಲ್ ಹೋರಾಟಗಾರರಿಗೆ ಸಿಎಂ ಭಯಪಡಬೇಕಿಲ್ಲ ಎಂದು ಸಿಎಂ ಬಿಎಸ್‍ವೈ ಪರ ಬ್ಯಾಟ್ ಬೀಸಿದ್ದಾರೆ.

ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನಾ, ಶರದ್ ಪವಾರ್, ಅಯೋಗ್ಯ ಅಜಿತ್ ಪವಾರ್ ಅವರನ್ನು ವಿರೋಧಿಸುತ್ತೇನೆ, ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಚಿಂತೆ ಮಾಡಬಾರದು, ನಾವು ಮೊದಲು ಹಿಂದೂಗಳು, ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ವಿಜಯಪುರದಲ್ಲಿ ಹೇಗೆ ಬಂದ್ ಮಾಡುತ್ತಾರೋ ನೋಡೋಣ, ಸುಮ್ಮನೆ ಕನ್ನಡದ ಹೆಸರಿನಲ್ಲಿ ಹೋರಾಟ ಸಲ್ಲದು, ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ, ಕನ್ನಡ ಪರ ಸಂಘಟನೆಗಳ ಮುಖಂಡರು ಎಷ್ಟು ಅನುದಾನ ಪಡೆದಿದ್ದಾರೆ, ಅವರು ಸರಕಾರದಿಂದ ಪಡೆದ ಹಣವನ್ನು ಯಾವುದಾದರೂ ಬೇರೆ ಕನ್ನಡಪರ ಸಂಘಟನೆಗಳಿಗೆ ನೀಡಿದ್ದಾರಾ ಎಂದು ಪ್ರಶ್ನಿಸಿದರು. ವಾಟಾಳ ನಾಗರಾಜ ಅವರಿಂದ ನಾವೇನು ಕಲಿಯಬೇಕಾಗಿಲ್ಲ, ಮರಾಠಾ ಸಮುದಾಯಕ್ಕೆ ನೀಡಿರುವ ನಿಗಮಕ್ಕೆ ಬೆಂಬಲವಿದೆ. ಸಿಎಂ ಏನಾದರೂ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ಮರಾಠಿ ಅಭಿವೃದ್ಧಿ ನಿಗಮ ಮಾಡಿಲ್ಲ, ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ, ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಇಂದು ನಾವೆಲ್ಲ ಹಿಂದೂಗಳಾಗಿ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣವಾಗಿದ್ದಾರೆ. ಶಿವಾಜಿ ಮಹಾರಾಜರು ಹುಟ್ಟಿರದಿದ್ದರೆ ಭಾರತ ಯಾವತ್ತೊ ಪಾಕಿಸ್ತಾನದ ಭಾಗವಾಗುತ್ತಿತ್ತು ಎಂದು ಕವಿಯೊಬ್ಬರು ಹೇಳಿದ್ದಾರೆ. ಶಿವಾಜಿ ಮಹಾರಾಜರು ಕನ್ನಡಿಗರೇ, ಆದಿಲ್ ಶಾಹಿ ಕಾಲದಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಬೆಂಗಳೂರಿನ ಸರದಾರರಾಗಿದ್ದರು. ಮರಾಠರೇ ಬೆಂಗಳೂರನ್ನು ಕಂಟ್ರೋಲ್ ಮಾಡುತ್ತಿದ್ದರು. ಮೊದಲು ಬೆಂಗಳೂರು ಆದಿಲ್ ಶಾಹಿ ಕಂಟ್ರೋಲ್‍ನಲ್ಲಿತ್ತು ಎಂದರು.

ಮರಾಠಾ ಸಮುದಾಯ ಯಾವಾಗಲೂ ಹಿಂದೂ ಪರವಾಗಿದೆ. ಧರ್ಮದ, ದೇಶದ ಪರವಾಗಿ ಹೋರಾಟ ಮಾಡಿದ ಆ ಸಮುದಾಯಕ್ಕೆ ಸರಕಾರ ಕಾನೂನಾತ್ಮಕವಾಗಿ ಆ ಪ್ರಾಧಿಕಾರಕ್ಕೆ ಏನೆಲ್ಲ ಕೊಡಲು ಸಾಧ್ಯವೋ ಅದನ್ನೆಲ್ಲ ಕೊಡಬೇಕು ಆದರೆ, ಮರಾಠಾ ಸಮುದಾಯದ ಕೊಡುಗೆ ದೊಡ್ಡದಿದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮರಾಠಾ ಸಮುದಾಯವಿದೆ. ಆ ನಿಗಮಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಯತ್ನಾಳ ಆಗ್ರಹಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News