ಕರ್ನಾಟಕದ ಐಪಿಎಸ್‌ ಅಧಿಕಾರಿ ಡಿ.ರೂಪಾ ವಿರುದ್ಧ ಕಂಗನಾ ಕೆಂಗಣ್ಣು: ಟ್ವೀಟ್ ಸಮರಕ್ಕೆ ಕಾರಣವಾಯಿತು 'ಪಟಾಕಿ'

Update: 2020-11-20 16:43 GMT

ಬೆಂಗಳೂರು: ದೀಪಾವಳಿಯಂದು ಪಟಾಕಿ ಸಿಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಹಾಗೂ ಬಾಲಿವುಡ್ ನಟ ಕಂಗನಾ ನಡುವೆ ಟ್ವಿಟರ್ ವಾಗ್ವಾದ ನಡೆದಿದ್ದು, ಡಿ.ರೂಪಾ ಅವರನ್ನು ಅಮಾನತುಗೊಳಿಸಬೇಕು ಎಂದು ಕಂಗನಾ ಒತ್ತಾಯಿಸಿದ್ದಾರೆ.

ನ.14ರಂದು ಪಟಾಕಿ ನಿಷೇಧ ಕುರಿತು ಟ್ವೀಟ್ ಮಾಡಿದ್ದ ಡಿ.ರೂಪಾ ಅವರು 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿ ಅಲ್ಲ ಎಂದಿದ್ದರು. ಇದು ನಟಿ ಕಂಗನಾ ಸೇರಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ''ಹಿಂದೂಗಳ ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಪಟಾಕಿ ಸಿಡಿಸುವ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿಲ್ಲ. ಇದು ಯುರೋಪಿಯನ್ನರಿಂದ ಬಂದ ಪದ್ಧತಿ'' ಎಂದಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹಲವರು, ಇದೇ ರೀತಿ ಇತರ ಧರ್ಮಗಳ ಪದ್ಧತಿಗಳನ್ನು ನೀವು ಪ್ರಶ್ನಿಸುತ್ತೀರಾ ಎಂದು ಕೇಳಿದ್ದಾರೆ.

ಡಿ.ರೂಪಾ ಅವರ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ 'ಟ್ರೂ ಇಂಡಾಲಜಿ'(TrueIndology) ಎಂಬ ಖಾತೆ ಭಾರತದ ಪ್ರಾಚೀನ ಗ್ರಂಥಗಳಲ್ಲಿ ಪಟಾಕಿ ಉಲ್ಲೇಖಿಸಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ರೂಪಾ ಅವರು ಉತ್ತರಿಸಿ, ಉಲ್ಲೇಖಿಸಿರುವ ಗ್ರಂಥಗಳ ಪುರಾವೆ ಒದಗಿಸುವಂತೆ ಸವಾಲು ಹಾಕಿದ್ದಾರೆ. ಇದೇ ವೇಳೆ ಈ ಖಾತೆ ಬಳಕೆದಾರರ ವಿರುದ್ಧ ಅವರು ಹರಿಹಾಯ್ದಿದ್ದು, 'ನಿಮ್ಮ ಸಮಯ ಮುಗಿದಿದೆ' ಎಂದು ತಿಳಿಸಿದ್ದರು. ಇಬ್ಬರ ನಡುವಿನ ವಾಗ್ವಾದ ಮುಂದುವರಿದಂತೆಯೇ, ಬುಧವಾರ ಟ್ವಿಟರ್ ಟ್ರೂ ಇಂಡಾಲಾಜಿ ಖಾತೆಯನ್ನು ನಿರ್ಬಂಧಿಸಿದೆ.

ಇನ್ನು ಈ ಖಾತೆಯನ್ನು ನಿರ್ಬಂಧಿದ್ದಕ್ಕೆ ನಟಿ ಕಂಗನಾ ಟ್ವಿಟರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಶ್ನೆಗಳಳಿಗೆ ಉತ್ತರ ನೀಡದಿದ್ದರೆ, ನಿಮ್ಮ ಮನೆ ಮುರಿಯುತ್ತಾರೆ, ನಿಮ್ಮನ್ನು ಜೈಲಿಗಟ್ಟುತ್ತಾರೆ. ನಿಮ್ಮ ಧ್ವನಿ ಅಡಗಿಸುತ್ತಾರೆ. ಒಬ್ಬರ ಡಿಜಿಟಲ್​ ಗುರುತನ್ನು ತೆಗೆದು ಹಾಕುವುದು ವರ್ಚುಯಲ್​ ಜಗತ್ತಿನಲ್ಲಿ ಕೊಲೆಗಿಂತ ಕಡಿಮೆ ಅಪರಾಧವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

''ಮೀಸಲಾತಿಯ ಅಡ್ಡಪರಿಣಾಮಗಳು. ಅನರ್ಹರು ಅಧಿಕಾರ ಪಡೆದಾಗ ಗಾಯ ವಾಸಿ ಮಾಡುವ ಬದಲು ಘಾಸಿಗೊಳಿಸುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೂ ತಿಳಿದಿಲ್ಲ. ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದಂತೂ ಖಂಡಿತ'' ಎಂದು ಕಂಗನಾ ಐಪಿಎಸ್‌ ಅಧಿಕಾರಿ ರೂಪಾ ಅವರ ನಡೆಯನ್ನು ಟೀಕಿಸಿದ್ದಾರೆ.

ಅಲ್ಲದೇ, ಡಿ.ರೂಪಾ ಅವರನ್ನು ಅಮಾನತುಗೊಳಿಸಬೇಕು ಎಂದು ಕಂಗನಾ ಒತ್ತಾಯಿಸಿದ್ದು, "ಅವರನ್ನು ಅಮಾನತುಗೊಳಿಸಬೇಕು. ಅವರಂತಹ ಪೊಲೀಸ್ ಅಧಿಕಾರಿಗಳು ಪೊಲೀಸ್ ಪಡೆಗೆ ನಾಚಿಕೆಗೇಡಿನ ಸಂಗತಿ. ಆಕೆ ಆಯ್ದುಕೊಂಡಿರುವ ಕೆಟ್ಟ ಮಾರ್ಗಗಳನ್ನು ನಾವು ತಡೆಯದೇ ಬಿಡಲಾರೆವು. #ShameOnYouIPSRoopa'' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, #BringBackTrueIndology ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಖಾತೆಯ ಅಮಾನತುಗೊಳಿಸುವ ಬಗ್ಗೆ ಅವರು ಟ್ವಿಟರ್ ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕರನ್ನು ಪ್ರಶ್ನಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ. "ಟ್ವಿಟರ್ ಇಂಡಿಯಾ ನಿಮ್ಮ ಪಕ್ಷಪಾತ ಮತ್ತು ಇಸ್ಲಾಮಿಸ್ಟ್ ಪ್ರಚಾರವು ಮುಜುಗರದ ಸಂಗತಿಯಾಗಿದೆ. ಟ್ರೂ ಇಂಡಾಲಜಿ ಖಾತೆಯನ್ನು ಏಕೆ ಅಮಾನತುಗೊಳಿಸಿದ್ದೀರಿ? ನಿಮಗೆ ನಾಚಿಕೆಯಾಗಬೇಕು. ಭಾರತದಲ್ಲಿ ನಿಮ್ಮನ್ನು ನಿಷೇಧಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ. ಪ್ರಧಾನಿ ಟ್ವಿಟರ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಗೃಹ ಇಲಾಖೆಯ ಕಾರ್ಯದರ್ಶಿ ಆಗಿರುವ ಡಿ.ರೂಪಾ ಅವರು ಇಂದು ಪ್ರತಿಕ್ರಿಯೆ ನೀಡಿದ್ದು, ನಾನು ಕಾನೂನು ಪಾಲನೆ ದೃಷ್ಟಿಯಿಂದ ಟ್ವೀಟ್ ಮಾಡಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ. ಪಟಾಕಿ ಸಿಡಿಸದಂತೆ ಜನರಿಗೆ ತಿಳಿಸಿದ್ದೆ ಅಷ್ಟೇ. ನನ್ನ ಶ್ರದ್ಧೆ, ಪ್ರಾಮಾಣಿಕತೆ ಜನರಿಗೆ ಗೊತ್ತಿದೆ. ಅಲ್ಲದೆ, ನಾನು ಕಾನೂನು ಪಾಲನೆ ಬಿಟ್ಟು ಬೇರೆನನ್ನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News