×
Ad

ರೈತ, ಕಾರ್ಮಿಕ ಕಾನೂನುಗಳನ್ನು ವಿರೋಧಿಸಿ ನ.26ಕ್ಕೆ ಕಾರ್ಮಿಕರ ಮುಷ್ಕರಕ್ಕೆ ಕರೆ

Update: 2020-11-20 22:41 IST

ಬೆಂಗಳೂರು, ನ.20: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಎಲ್ಲ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಾಗೂ ರೈತ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಬೇಕು, ಸಾರ್ವಜನಿಕ ವಲಯ ಉದ್ದಿಮೆಗಳ ಖಾಸಗೀಕರಣವನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ನ.26 ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.

ಈ ಸಂಬಂಧ ನಗರದ ಗಾಂಧೀ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಸಿಟಿಯು ಮುಖಂಡರು, ಕೇಂದ್ರ ಸರಕಾರವು ಯಾವುದೇ ಕಾನೂನು, ಕಾಯ್ದೆಗಳನ್ನು ಜಾರಿ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಬೇಕಿದೆ. ಅಲ್ಲಿ ಬರುವ ಸಲಹೆ, ಸೂಚನೆಗಳನ್ನು ಆಧಾರವಾಗಿಟ್ಟುಕೊಂಡು ತಿದ್ದುಪಡಿ ಮೂಲಕ ಮಾಡಬೇಕಿದೆ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‍ಡಿಎ ಸರಕಾರವು ಸರ್ವಾಧಿಕಾರಿತನವನ್ನು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿದರು.

ಸಿಐಟಿಯು ಅಧ್ಯಕ್ಷರಾದ ವರಲಕ್ಷ್ಮಿ ಮಾತನಾಡಿ, ದೇಶದಲ್ಲಿ ಇದುವರೆಗೂ ಇರುವಂತಹ 44 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಅದನ್ನು ನಾಲ್ಕು ಕಾಯ್ದೆಗಳಾಗಿ ಮಾಡುತ್ತಿದ್ದಾರೆ. ಸರಕಾರವು ಕೋವಿಡ್ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಕಾರ್ಮಿಕರ ಹಿತಕ್ಕೆ ಧಕ್ಕೆಯಾಗುವಂತಹ ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ ಅಪ್ರಜಾಸತ್ತಾತ್ಮಕವಾಗಿ ಅಂಗೀಕರಿಸಿದ್ದಾರೆ ಎಂದು ಅಪಾದಿಸಿದರು.

ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಬಿಸಿಯೂಟ, ಕಾರ್ಮಿಕರು, ಬೀಡಿ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನಿರ್ಮಾಣ ಕಾರ್ಮಿಕರು, ರಿಕ್ಷಾ ಎಳೆಯುವವರು ಸೇರಿದಂತೆ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರನ್ನು ಕಾನೂನು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಮತ್ತೊಂದು ಕಡೆ ಎಲ್ಲ ಸಂಸದೀಯ ಹಾಗೂ ಸಾಂವಿಧಾನಿಕ ಕಾರ್ಯ ವಿಧಾನಗಳನ್ನು ಉಲ್ಲಂಘಿಸಿ ಸರಕಾರವು ರೈತ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ ಎಂದು ಅವರು ಹೇಳಿದರು.

ಎಐಟಿಯುಸಿ ಮುಖಂಡ ವಿಜಯಭಾಸ್ಕರ್ ಮಾತನಾಡಿ, ಸರಕಾರದ ಕೆಟ್ಟ ಆಡಳಿತದಿಂದಾಗಿ ದೇಶದ ಆರ್ಥಿಕತೆ ದಿವಾಳಿ ಅಂಚಿಗೆ ಬಂದು ಸಿಲುಕಿದೆ. ಕೊರೋನ ಕಾಲಘಟ್ಟದಲ್ಲಿ ತರಾತುರಿಯಲ್ಲಿ ಸಾರ್ವಜನಿಕ ಲಾಭದಾಯಕ ಉದ್ದಿಮೆಗಳಾದ ವಿಮಾನ ನಿಲ್ದಾಣಗಳು, ರೈಲ್ವೆ, ಬಿಎಸ್ಸೆನ್ನೆಲ್, ಬಂದರು ಹಾಗೂ ಹಡಗುಕಟ್ಟೆಗಳು, ಯುದ್ಧ ಸಾಮಗ್ರಿ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟಕ್ಕಿಡಲಾಗಿದೆ. ಇನ್ನೂ, ಕೊರೋನ ವಾರಿಯರ್ಸ್ ಆಗಿ ದುಡಿದವರಿಗೆ ಹಣಕಾಸು ಮತ್ತು ವಿಮಾ ಸೌಲಭ್ಯಗಳನ್ನು ನೀಡದೇ ಅವರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರಕಾರ ತರಾತುರಿಯಲ್ಲಿ ಜಾರಿಗೊಳಿಸಿದ ಲಾಕ್‍ಡೌನ್‍ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಬದುಕು ಕಳೆದುಕೊಂಡಿದ್ದಾರೆ. ಇನ್ನೊಂದು ಕಡೆ ಹಲವಾರು ಕುಟುಂಬಗಳು ಜೀವನ ನಡೆಸಲು ಇಂದಿಗೂ ಕಷ್ಟಪಡುತ್ತಿದ್ದಾರೆ. ದೌರ್ಜನ್ಯ, ದರೋಡೆ, ಸುಲಿಗೆ ಹೆಚ್ಚಾಗಿದೆ. ಆದರೂ, ಆಡಳಿತದಲ್ಲಿರುವ ಸರಕಾರವು ಉದ್ಯೋಗ ಸೃಷ್ಟಿಯ ಬಗ್ಗೆ ಗಮನ ನೀಡುತ್ತಿಲ್ಲ, ಜನರ ಆರ್ಥಿಕ ಭದ್ರತೆ ಗಟ್ಟಿಗೊಳ್ಳುವ ಕಡೆಗೆ ಚಿಂತಿಸುತ್ತಿಲ್ಲ ಎಂದು ಅವರು ದೂರಿದರು.

ನ.26 ರಂದು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ದಿನಗೂಲಿ ನೌಕರರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಮುಷ್ಕರದ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಸರಕಾರದ ವಿರುದ್ಧ ಧ್ವನಿ ಎತ್ತಲಾಗುತ್ತದೆ ಎಂದು ಸಂಘಟನೆಗಳ ಮುಖಂಡರು ವಿವರಿಸಿದರು.

ಬೇಡಿಕೆಗಳು: ಕಾರ್ಮಿಕ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯನ್ನು 200 ದಿನಕ್ಕೆ ಹೆಚ್ಚಿಸಿ, ಅದನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಆಶಾ-ಅಂಗನವಾಡಿ ಕಾರ್ಯಕರ್ತೆಯರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ಎಲ್ಲರಿಗೂ ಪಿಂಚಣಿ ನೀಡಿ, ಎನ್‍ಪಿಎಸ್ ರದ್ದು ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News