ಮರಾಠ ಪ್ರಾಧಿಕಾರಕ್ಕೆ ವಿರೋಧ: ಡಿ.5ರ ಕರ್ನಾಟಕ ಬಂದ್‍ ಗೆ ಹಲವು ಸಂಘಟನೆಗಳ ಬೆಂಬಲ

Update: 2020-11-20 17:17 GMT

ಬೆಂಗಳೂರು, ನ.20: ರಾಜ್ಯ ಸರಕಾರ ನೂತನವಾಗಿ ರಚಿಸಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಪ್ರಾಧಿಕಾರದ ರಚನೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಡಿ.5 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿವೆ.

ಈ ಸಂಬಂಧ ನಗರದಲ್ಲಿಂದು ಆಯೋಜಿಸಿದ್ದ ಸಭೆಯಲ್ಲಿ ಹಲವಾರು ಸಂಘಟನೆಗಳು ಪಾಲ್ಗೊಂಡು ಬಂದ್ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಕೆಲವೊಂದು ಸಂಘಟನೆಗಳ ಮುಖಂಡರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಬಂದ್‍ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿವೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯಾದ್ಯಂತ ಡಿ.5 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ನಡೆಸಲು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನವಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಪ್ರಧಾನ ನಗರಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬಸವಕಲ್ಯಾಣ ಹಾಗೂ ಮಸ್ಕಿ ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠ ಅಭಿವೃದ್ಧಿ ನಿಗಮ ಮಾಡಲಾಗಿದೆ ಎಂದು ಆಪಾದಿಸಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿಯು ನಮ್ಮನ್ನು ಬೇಕಾದರೆ ಜೈಲಿಗೆ ಹಾಕಿಸಲಿ. ಆದರೆ, ಬಂದ್ ಮಾಡುವ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ. ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಹೇಳಬಾರದು, ಬಂದ್ ದಿನ ಯಾವ ವಾಹನ ಸಂಚಾರವಿರುವುದಿಲ್ಲ. ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ಮೆರವಣಿಗೆ ನಡೆಸಲಾಗುತ್ತದೆ. ಅಂದು ಬಂದ್‍ಗೆ ಹೋಟೆಲ್ ಮಾಲಕರ ಸಂಘ, ಉಬರ್, ಓಲಾ ಕ್ಯಾಬ್ ಚಾಲಕರು ಬೆಂಬಲಿಸಿದ್ದಾರೆ. ಇನ್ನೂ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದು ಮಾಹಿತಿ ನೀಡಿದರು.

ಗಡಿ ರಸ್ತೆ ಬಂದ್: ಕರ್ನಾಟಕ ಬಂದ್‍ಗೆ ಮುನ್ನ ಕನ್ನಡ ಪರ ಸಂಘಟನೆಗಳು ಗಡಿ ರಸ್ತೆ ಬಂದ್ ಮಾಡುವ ಯೋಜನೆ ಹೊಂದಿದ್ದು ಈ ಯೋಜನೆಯಂತೆ ನವೆಂಬರ್ 23 ರಂದು ಬಳ್ಳಾರಿ ಗಡಿ ರಸ್ತೆ ಬಂದ್ ಆಗಲಿದೆ. ನವೆಂಬರ್ 24 ರಂದು ಅತ್ತಿಬೆಲೆ ಗಡಿ ಬಂದ್ ಆಗಲಿದೆ. ಮತ್ತು ನವೆಂಬರ್ 30ಕ್ಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಂದ್ ಆಚರಿಸುವ ಯೋಜನೆ ಇದೆ. ಡಿ.1ಕ್ಕೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆಗೆ ಕರೆ ನೀಡಲಾಗಿದೆ. ನವೆಂಬರ್ 30ರ ಒಳಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶವನ್ನು ಹಿಂಪಡೆಯದೆ ಇದ್ದರೆ, ಡಿಸೆಂಬರ್ 1ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಕರವೇ ಅಧ್ಯಕ್ಷ ಶಿವರಾಮೇಗೌಡ, ಮಂಜುನಾಥ್ ದೇವ, ಗಿರೀಶ್ ಗೌಡ, ಪಾಲನೇತ್ರ, ಟಿ.ಪಿ ಪ್ರಸನ್ನಕುಮಾರ್, ಅಮ್ಮಿಚಂದ್ರು. ನಾರಾಯಣ ಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News