ಗೋಹತ್ಯೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೆ ಸರಕಾರ ಬದ್ಧ: ಸಚಿವ ಪ್ರಭು ಚೌಹಾಣ್

Update: 2020-11-20 17:49 GMT

ಬಾಗಲಕೋಟೆ, ನ.20: ಸಕಾಲದಲ್ಲಿ ರೈತರ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ರಾಜ್ಯದ 16 ಜಿಲ್ಲೆಗೆಳಿಗೆ ಪಶು ಸಂಚಾರಿ ಆಂಬ್ಯುಲೆನ್ಸ್ ನೀಡಲಾಗಿದ್ದು, ಉಳಿದ ಜಿಲ್ಲೆಗಳಿಗೂ ಸದ್ಯದಲ್ಲಿಯೆ ವಿಸ್ತರಿಸಲಾಗುತ್ತಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದರು.

ನಗರದಲ್ಲಿನ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಶುಪಾಲಕರ, ರೈತರ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸಂಚಾರಿ ಆಂಬ್ಯುಲೆನ್ಸ್‍ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. ಸಂಚಾರಿ ಆಂಬ್ಯುಲೆನ್ಸ್ ವಿಶೇಷವಾದ ಪಶು ಸೇವಾ ಸೌಲಭ್ಯ, ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್, ತುರ್ತು ಚಿಕಿತ್ಸಾ ಘಟಕ ಹೊಂದಿದೆ. ಒಟ್ಟಾರೆಯಾಗಿ ಪಶು ಆಸ್ಪತ್ರೆಯೇ ರೈತರ ಮನೆ ಬಾಗಿಲಿಗೆ ಬರಲಿದೆ ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಪಶುವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲಮಿತಿಯಲ್ಲಿ ಕೈಗೊಳ್ಳಲು ವಾರ್ ರೂಮ್ ಮಾಡಲು ತಯಾರಿ ನಡೆಸಲಾಗುತ್ತಿದೆ. ದಿನ 24 ಗಂಟೆಗಳ ಸೌಲಭ್ಯ, ಟೋಲ್ ಫ್ರೀ ನಂಬರ್ ವ್ಯವಸ್ಥೆ, ಕರೆ ಮಾಡಿದ 4 ಗಂಟೆಗಳಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾರ್ ರೂಮ್ ಮೂಲಕ ರೈತರಿಗೆ ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತ ಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು. 

ಪ್ರಾಣಿ ಹಿಂಸೆ ತಡೆಯಲು ಕಾನೂನುಗಳನ್ನು ಬಿಗಿಗೊಳಿಸಲು ಕ್ರಮವಹಿಸಲಾಗಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಆರ್‍ಟಿಪಿಸಿಆರ್ ಯಂತ್ರಗಳನ್ನು ಕೋವಿಡ್ ಪತ್ತೆಗೆ ಹಸ್ತಾಂತರಿಸಲಾಗಿದೆ. ಪರಿಸರ ದಿನಾಚರಣೆ ಅಂಗವಾಗಿ ಪಶು ವೈದ್ಯ ಸಂಸ್ಥೆಗಳಲ್ಲಿ ಮತ್ತು ಫಾರಂಗಳಲ್ಲಿ ಗಿಡಗಳನ್ನು ಏಕಕಾಲಕ್ಕೆ ನೆಡಲಾಗಿದೆ ಎಂದು ಅವರು ತಿಳಿಸಿದರು.

ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಅನುಷ್ಠಾನಕ್ಕೆ ತಂದಿದ್ದು, ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಪ್ರಭು ಚೌಹಾಣ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News