ಜಾತಿ ಪ್ರಾಧಿಕಾರಗಳನ್ನು ರಚಿಸಿ ಅಶಾಂತಿ ಸೃಷ್ಟಿಸಲು ಅವಕಾಶ ಕೊಡಬಾರದು: ಎಚ್.ವಿಶ್ವನಾಥ್

Update: 2020-11-20 18:32 GMT

ಮೈಸೂರು,ನ.20: ಜಾತಿ ಪ್ರಾಧಿಕಾರಗಳನ್ನು ರಚಿಸಿ ಅಶಾಂತಿ ಸೃಷ್ಟಿಸುವ ವಾತಾವರಣಕ್ಕೆ ಅವಕಾಶ ಕೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಪ್ರಾಧಿಕಾರಗಳನ್ನು ರಚಿಸುವುದು ಸರಿಯಲ್ಲ. ಈ ನೆಲ ಕರ್ನಾಟಕ ಬಹಳ ವಿಶೇಷವಾದದ್ದು. ಕುವೆಂಪು ಅವರು ಹೇಳಿದಂತೆ ಚೆಲುವ ಕನ್ನಡ ನಾಡು. ಇದು ಶಾಂತಿಯ ನೆಲ ಬೀಡು. ಇಂಥ ನೆಲದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಿದ್ದಿಪುರುಷರ ಕಲ್ಪನೆಯಲ್ಲಿ ಸಂವಿಧಾನ ರಚನೆಯಾಗಿದೆ. ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧಿ ಹೆಸರಲ್ಲಿ ಅವರ ಆಶಯಗಳಂತೆ ಸರ್ಕಾರಗಳನ್ನು ನಡೆಸಬೇಕಿದೆ. ಆ ರೀತಿಯಲ್ಲಿ ಆಡಳಿತ ನಡೆಸುವಂತೆ ಕೇಳಿಕೊಳ್ಳುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಂಪುಟ ವಿಸ್ತರಣೆಯೊ? ಪುನರ್‍ರಚನೆಯೊ? ಅದು ಯಾವಾಗ ಎಂಬುದೆಲ್ಲ ಅಮಿತ್ ಶಾ ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು ಎಂದರು. ಒಂದು ಪರಿಪೂರ್ಣವಾದ ಸಂಪುಟದ ಅವಶ್ಯಕತೆ ಇದೆ. ಜನರ ಜೊತೆಯಲ್ಲಿ ಇದ್ದು ಕೆಲಸ ಮಾಡುವ ಸದೃಡ ಸಂಪುಟ ಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News