×
Ad

ಶಾಸಕ ಯತ್ನಾಳ್‍ರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದ ಸಾ.ರಾ ಗೋವಿಂದು

Update: 2020-11-21 18:05 IST

ಬೆಂಗಳೂರು, ನ.21: ನಾಲಿಗೆ ಮೇಲೆ ಹಿಡಿತವಿಲ್ಲದ, ಮತಿಯನ್ನು ಕಳೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.

ಕನ್ನಡ ಹೋರಾಟಗಾರರು ರೋಲ್‍ಕಾಲ್ ಹೋರಾಟಗಾರರು, ನಕಲಿ ಹೋರಾಟಗಾರರು. ಅವರ ಹೋರಾಟಕ್ಕೆ ಅಂಜುವ ಅಗತ್ಯವಿಲ್ಲ ಎಂಬ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದ ಆಸೆಗೆ ಪದೇ ಪದೇ ಪಕ್ಷಾಂತರ ಮಾಡುವ ಯತ್ನಾಳ್, ಜೀವಮಾನವಿಡೀ ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ನಮ್ಮಂತಹವರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಹೊಂದಿಲ್ಲ. ಬಹಿರಂಗ ವೇದಿಕೆ ಸಿದ್ಧಪಡಿಸುತ್ತೇವೆ. ಯಾರ ಸಂಪಾದನೆ ಎಷ್ಟಿದೆ ಎಂಬುದು ಚರ್ಚೆಯಾಗಲಿ ಎಂದು ಹೇಳಿದರು.

ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ, ಜಾತ್ಯತೀತವಾದಿ ಎಂದು ಒಂದು ಪಕ್ಷ ಸೇರುವ, ಕೋಮುವಾದಿ ಎಂದು ಮತ್ತೊಂದು ಪಕ್ಷದಲ್ಲಿ ಹೇಳಿಕೊಳ್ಳುವ ಇವರಿಂದ ನಾವು ಪಾಠ ಕಲಿಯಬೇಕೇ ಎಂದು ಪ್ರಶ್ನಿಸಿದ್ದಾರೆ. ನಾಲಿಗೆ ಮೇಲೆ ನಿಯಂತ್ರಣವಿಲ್ಲದೆ ಮುಖ್ಯಮಂತ್ರಿ ವಿರುದ್ಧವೂ ಮಾತನಾಡುವ ಇವರನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಇಂದು ಏನಾದರೂ ರಾಜ್ಯದಲ್ಲಿ ಕನ್ನಡ ಉಳಿದಿದೆ ಎಂದರೆ ಅದು ಹೋರಾಟಗಾರರಿಂದ ಮಾತ್ರ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕನ್ನಡ ಹಿತಾಸಕ್ತಿಯನ್ನು ಬಲಿ ಕೊಡುವ ಸಂದರ್ಭದಲ್ಲಿ ಅದರ ವಿರುದ್ಧ ದನಿ ಎತ್ತಿ ತಮ್ಮ ಕುಟುಂಬ ಸೇರಿದಂತೆ ಎಲ್ಲವನ್ನೂ ಕಡೆಗಣಿಸಿ ಬೀದಿಗಿಳಿದು ಹೋರಾಟ ಮಾಡಿ ಜೈಲು, ಬೇಲು ಎಂದು ಪರಿತಪಿಸುತ್ತಿರುವವರು ಕನ್ನಡಪರ ಹೋರಾಟಗಾರರು. ಇವರ ನೋವು ಯತ್ನಾಳ್ ಅಂತಹವರಿಗೇನು ಗೊತ್ತು? ಗೋಕಾಕ್ ಚಳವಳಿ, ಕಾವೇರಿ, ಮಹದಾಯಿ ಎಲ್ಲ ಹೋರಾಟವನ್ನೂ ಮಾಡಿಕೊಂಡು ಬಂದವರು ಕನ್ನಡಪರ ಹೋರಾಟಗಾರರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News