×
Ad

2021ನೇ ಸಾಲಿನ ರಜಾ ದಿನಗಳ ಪಟ್ಟಿ ಪ್ರಕಟ

Update: 2020-11-21 18:09 IST

ಬೆಂಗಳೂರು, ನ. 21: ರಾಜ್ಯ ಸರಕಾರವು 2021ನೆ ಸಾಲಿನ 'ಸಾರ್ವತ್ರಿಕ ರಜಾ ದಿನಗಳ ಪಟ್ಟಿ'ಯನ್ನು ಬಿಡುಗಡೆ ಮಾಡಿದ್ದು, ರವಿವಾರ, ಎರಡನೇ ಮತ್ತು ನಾಲ್ಕನೆ ಶನಿವಾರಗಳಲ್ಲದೆ ಒಟ್ಟು 20 ದಿನಗಳ ರಜೆಯನ್ನು ಘೋಷಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ನಯೀಮ್ ಮೊಮಿನ್ ಆದೇಶ ಹೊರಡಿಸಿದ್ದಾರೆ.

2021ರ ಜನವರಿ 14 ಮಕರ ಸಂಕ್ರಾಂತಿ, ಜನವರಿ 26 ಗಣರಾಜ್ಯೋತ್ಸವ, ಮಾರ್ಚ್ 11 ಮಹಾ ಶಿವರಾತ್ರಿ, ಎಪ್ರಿಲ್ 2 ಗುಡ್ ಫ್ರೈಡೇ, ಎಪ್ರಿಲ್ 13 ಯುಗಾದಿ, ಎಪ್ರಿಲ್ 14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮೇ 1 ಕಾರ್ಮಿಕ ದಿನಾಚರಣೆ, ಮೇ 14 ಬಸವ ಜಯಂತಿ/ ರಂಝಾನ್, ಜುಲೈ 21 ಬಕ್ರೀದ್, ಆಗಸ್ಟ್ 20  ಮೊಹರಂ ಕಡೇ ದಿನ.

ಸೆಪ್ಟೆಂಬರ್ 10 ವರಸಿದ್ಧಿ ವಿನಾಯಕ ವ್ರತ, ಅಕ್ಟೋಬರ್ 2 ಗಾಂಧಿ ಜಯಂತಿ, ಅಕ್ಟೋಬರ್ 6 ಮಹಾಲಯ ಅಮವಾಸ್ಯೆ, ಅಕ್ಟೋಬರ್ 14 ಮಹಾನವಮಿ, ಆಯುಧ ಪೂಜೆ, ಅಕ್ಟೋಬರ್ 15 ವಿಜಯ ದಶಮಿ, ಅಕ್ಟೋಬರ್ 20 ಮಹರ್ಷಿ ವಾಲ್ಮೀಕಿ ಜಯಂತಿ/ಮೀಲಾದುನ್ನಬಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ, ನವೆಂಬರ್ 3 ನರಕ ಚತುರ್ದಶಿ, ನವೆಂಬರ್ 5 ಬಲಿ ಪಾಢ್ಯಮಿ, ದೀಪಾವಳಿ ಹಾಗೂ ನವೆಂಬರ್ 22 ಕನಕದಾಸ ಜಯಂತಿ ಸಾರ್ವತ್ರಿಕ ರಜೆ ಎಂದು ಪ್ರಕಟಿಸಲಾಗಿದೆ.

ಎಪ್ರಿಲ್ 25ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ರವಿವಾರ ಬರಲಿದೆ. ಡಿಸೆಂಬರ್ 25ರಂದು ಕ್ರಿಸ್‍ಮಸ್ ನಾಲ್ಕನೆ ಶನಿವಾರದಂದು ಬರಲಿದೆ. ಹಾಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಘೋಷಿಸಿಲ್ಲ.

ಕೊಡವರಿಗೆ ವಿಶೇಷ ರಜೆ: ಸೆಪ್ಟೆಂಬರ್ 3ರ ಶುಕ್ರವಾರದಂದು ‘ಕೈಲ್ ಮುಹೂರ್ತ'ಕ್ಕೆ, ಅಕ್ಟೋಬರ್ 18ರ ಸೋಮವಾರದಂದು ತುಲಾ ಸಂಕ್ರಮಣಕ್ಕೆ ಮತ್ತು ನವೆಂಬರ್ 20ರ ಶನಿವಾರದಂದು ‘ಹುತ್ತರಿ ಹಬ್ಬ’ಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರಕಾರಿ ನೌಕರರಿಗೆ ರಜೆ ಮಂಜೂರು ಮಾಡಬಹುದು ಎಂದು ಆದೇಶದಲ್ಲಿ ಇದೇ ವೇಳೆ ಸ್ಪಷ್ಟನೆ ನೀಡಲಾಗಿದೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರತ್ಯೇಕ ರಜೆ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರಕಾರಿ ನೌಕರರು ಎರಡು ದಿನಗಳಿಗಳಿಗೆ ಮೀರದಂತೆ 2021ನೇ ವರ್ಷದಲ್ಲಿ ಅನುಬಂಧದಲ್ಲಿ ತಿಳಿಸಿರುವ ಪರಿಮಿತಿ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News