ಇಂಧನ ಇಲಾಖೆ ನಿರ್ಲಕ್ಷ್ಯದಿಂದ 15 ಸಾವಿರ ಕೋಟಿ ರೂ.ನಷ್ಟ: ಈಶ್ವರ್ ಖಂಡ್ರೆ

Update: 2020-11-21 15:18 GMT

ಬೆಂಗಳೂರು, ನ.21: ರಾಜ್ಯ ಇಂಧನ ಇಲಾಖೆಯ ಉನ್ನತಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಬೊಕ್ಕಸಕ್ಕೆ ಈಗಾಗಲೆ 15 ಸಾವಿರ ಕೋಟಿ ರೂ.ನಷ್ಟವಾಗಿದ್ದು, ಸರಕಾರ ಈ ನಷ್ಟದ ಹೊರೆಯನ್ನು ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರ ಮೇಲೆ ಹಾಕಿರುವುದು ಅಕ್ಷಮ್ಯ ಮತ್ತು ಅಮಾನವೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸೌರ ವಿದ್ಯುತ್ ಪಾರ್ಕ್ ಮತ್ತು ಘಟಕಗಳ ಸ್ಥಾಪನೆ, ಇತರ ಮೂಲಗಳ ಹೆಚ್ಚುವರಿ ಸಾಮರ್ಥ್ಯದಿಂದಾಗಿ ಪ್ರಸ್ತುತ ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಕೇಂದ್ರದಿಂದ ಮತ್ತು ಇತರ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡುವ ಅಗತ್ಯ ಇಲ್ಲ ಎಂದರು.

ಈಗಾಗಲೆ ಮಾಡಿಕೊಂಡಿರುವ ದೀರ್ಘಾವಧಿ ವಿದ್ಯುತ್ ಖರೀದಿಗೆ ಒಪ್ಪಂದ ರದ್ದುಪಡಿಸುವ ಅವಕಾಶವಿದ್ದರೂ ಇಂಧನ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವ ಕಾರಣ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂ.ನಷ್ಟ ಉಂಟಾಗಿದ್ದು, ಸರಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ 4 ವರ್ಷದಲ್ಲಿ 44 ಸಾವಿರ ಕೋಟಿ ರೂ.ನಷ್ಟದ ಹೊರೆಯನ್ನು ರಾಜ್ಯದ ಜನತೆ ಹೊರಬೇಕಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ತಗ್ಗಿಸಿ ಅಥವಾ ನಿಲ್ಲಿಸಿ, ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಸರಕಾರ, ಕೇಂದ್ರದಿಂದ ಮತ್ತು ಅನ್ಯ ರಾಜ್ಯದಿಂದ ವಿದ್ಯುತ್ ಖರೀದಿಸುತ್ತಿರುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದ ಅವರು, ಇಂಧನ ಇಲಾಖೆ ಸೂಕ್ತ ಲೆಕ್ಕಾಚಾರ ಇಲ್ಲದೆ ವಿದ್ಯುತ್ ಖರೀದಿಸುತ್ತಿರುವುದರಿಂದ ಮತ್ತು ಸೂಕ್ತ ಕಾಲದಲ್ಲಿ ಒಪ್ಪಂದ ರದ್ದು ಮಾಡದೆ ಇರುವುದರಿಂದಾಗಿ 15 ಸಾವಿರ ಕೋಟಿ ರೂ.ನಷ್ಟ ಉಂಟಾಗಿರುವ ಕುರಿತಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೆ ಸರಕಾರಕ್ಕೆ ಅ.14 ಹಾಗೂ 15ರಂದು 40 ಪುಟಗಳ ಸವಿವರವಾದ ಪತ್ರ ಬರೆದಿದ್ದಾರೆ ಎಂದರು.

ರಾಜ್ಯದಲ್ಲಿ 55,387 ದಶಲಕ್ಷ ಯುನಿಟ್ ಹೆಚ್ಚುವರಿ ಬಳಕೆಯಾಗದ ಸಾಮರ್ಥ್ಯವನ್ನು ಹೊಂದಿದೆ. ಎನ್.ಸಿ.ಇ ಮತ್ತು ಕೆಪಿಸಿಎಲ್ ಸೇರಿದಂತೆ ಇದಕ್ಕಾಗಿ 11,069 ಕೋಟಿ ರೂ.ಪಾವತಿಸಿದೆ. ಈ ಪೈಕಿ 9284 ಕೋಟಿ ರೂ.ಗಳನ್ನು ಸಾಮರ್ಥ್ಯದ ಬಳಕೆ ಮಾಡಿಕೊಳ್ಳದಿರುವುದಕ್ಕಾಗಿ ವೆಚ್ಚ ಮಾಡಲಾಗಿದೆ. ಉಳಿದ 1785 ಕೋಟಿ ರೂ.ಗಳನ್ನು ಪಿಜಿಸಿಐಎಲ್‍ನೊಂದಿಗೆ ಸಂಪರ್ಕಿತವಾದ ವಿದ್ಯುತ್ ಪ್ರಸರಣ ಕಾರಿಡಾರ್ ಬಳಕೆ ಮಾಡಿಕೊಳ್ಳದಿರುವುದಕ್ಕೆ ವೆಚ್ಚ ಮಾಡಲಾಗಿದೆ. ಇದನ್ನು ರದ್ದು ಮಾಡದಿದ್ದರೆ, ರಾಜ್ಯ ತಾನು ಪಡೆಯದ ವಿದ್ಯುತ್‍ಗೆ ಹಣ ಪಾವತಿ ಮಾಡುವುದರಿಂದ ಅದರ ಹೊರೆ ಬೆಲೆ ಏರಿಕೆಯ ರೂಪದಲ್ಲಿ ಜನತೆಗೆ ಆಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News