ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24/7 ಸೇವೆ: ಸಚಿವ ಡಾ.ಸುಧಾಕರ್

Update: 2020-11-21 15:28 GMT

ಬೆಳಗಾವಿ, ನ.21: ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24/7 ಕಾರ್ಯ ನಿರ್ವಹಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಯ ಆವರಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನವರಿಯಿಂದ ಎಲ್ಲ ರೀತಿಯ ಪರೀಕ್ಷೆ ಸಂಪೂರ್ಣ ಉಚಿತವಾಗಿ ನೀಡಲು ಸರಕಾರ ನಿರ್ಧರಿಸಿದೆ. ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಮಾಡಲಾಗುವುದು. ಚೀಟಿ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಯಾವುದೇ ಔಷಧಿ ಅಗತ್ಯವಿದ್ದರೂ ಸರಕಾರ ಪೂರೈಸುತ್ತಿದೆ ಎಂದು ತಿಳಿಸಿದರು.

ಜನಸಂಖ್ಯೆ ಆಧರಿಸಿ ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಆಂಬ್ಯುಲೆನ್ಸ್ ಸೇವೆಯನ್ನು ಬಲವರ್ಧನೆ ಮಾಡಲು ತೀರ್ಮಾನಿಸಲಾಗಿದೆ. ಶುಚಿತ್ವ ಇರುವುದಿಲ್ಲ ಎಂಬ ದೊಡ್ಡ ಆರೋಪ ಸರಕಾರಿ ಆಸ್ಪತ್ರೆಗಳ ಮೇಲಿದೆ. ವಿಷಯ ಪರಿಣಿತಿ ಜತೆಗೆ ಆಡಳಿತಾತ್ಮಕ ಕೌಶಲವನ್ನು ವೈದ್ಯರು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗಿಂತ ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದಾಗ್ಯೂ ಜನರಿಗೆ ಯಾಕೆ ಉತ್ತಮ ಸೌಕರ್ಯಗಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಖಾಸಗಿ ಆಸ್ಪತ್ರೆಗಿಂತ ಉತ್ತಮ ಸೇವೆ ನೀಡುವುದು ಸಾಧ್ಯವಾಗಲಿದೆ. ಎಲ್ಲ ಹಂತದ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಯ ಕೌಶಲ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 350 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಲೋಕಾರ್ಪಣೆಯಾಗಲಿದೆ. ಆರಂಭದ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಅತೀ ಹೆಚ್ಚು ಕಂಡುಬಂದವು. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜನರ ಸಹಕಾರದಿಂದ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಲಾಗಿದೆ.  ಜಿಲ್ಲೆಯಲ್ಲಿ ಶೇ.97 ಸರಾಸರಿ ಗುಣಮುಖರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಶೇ.0.8ರಷ್ಟು ಸಾವಿನ ಪ್ರಮಾಣವಿದೆ. ಕೋವಿಡ್-19 ನಿಯಂತ್ರಣದಲ್ಲಿ ಬೆಳಗಾವಿ ಜಿಲ್ಲೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ-ವೈದ್ಯಕೀಯ ಶಿಕ್ಷಣ ವಿಲೀನ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಮುಂಬರುವ ದಿನಗಳಲ್ಲಿ ವಿಲೀನಗೊಳಿಸಿ ಒಂದೇ ಇಲಾಖೆ ರೂಪಿಸುವ ಚಿಂತನೆ ಸರಕಾರಕ್ಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲು ವೈದ್ಯಕೀಯ ಬೋಧಕ-ಬೋಧಕೇತರ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ, ಪಿಂಚಣಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮತ್ತಿತರ ಕೆಲಸಗಳನ್ನು ಸರಕಾರ ಮಾಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕತೆಯನ್ನು ಶಾಸಕ ಅನಿಲ್ ಬೆನಕೆ ವಹಿಸಿದ್ದರು. ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News