ಮೇಲ್ವರ್ಗದವರಿಂದ ಒಂಟಿ ದಲಿತ ಮಹಿಳೆಯ ಮನೆ ಧ್ವಂಸ ಆರೋಪ: ಎಫ್‍ಐಆರ್ ದಾಖಲು

Update: 2020-11-21 15:35 GMT

ಚಿಕ್ಕಮಗಳೂರು, ನ.21: ಮೇಲ್ವರ್ಗದ ಪ್ರಭಾವಿಯೊಬ್ಬರು ದಲಿತ ಕುಟುಂಬಕ್ಕೆ ಸೇರಿದ್ದ ಮನೆಯೊಂದನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕೆಡವಿದ್ದಲ್ಲದೇ ಮನೆ ಇದ್ದ ಜಾಗಕ್ಕೆ ಬೇಲಿ ಹಾಕಿ ಕಾಫಿ, ಅಡಿಕೆ ಗಿಡಗಳನ್ನು ನೆಟ್ಟಿ ಜಾಗವನ್ನು ಕಬಳಿಸಿದ್ದಾರೆನ್ನಲಾದ ಘಟನೆ ಮೂಡಿಗೆರೆ ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ವರದಿಯಾಗಿದೆ.

ಮೂಡಿಗೆರೆ ತಾಲೂಕು ಸರಗೋಡು ಗ್ರಾಮ ವ್ಯಾಪ್ತಿಯ ಹುಯಿಗೆರೆ ಗ್ರಾಮದಲ್ಲಿ ಪತಿಯನ್ನು ಕಳೆದುಕೊಂಡ ಗಿರಿಜಾ ಎಂಬ ಮಹಿಳೆ ತನ್ನ ಮನೆಯಲ್ಲಿ ಒಬ್ಬರೇ ನೆಲೆಸಿದ್ದು, ಮನೆ ಹಾಗೂ ಜಾಗದ ಪಕ್ಕದಲ್ಲೇ ಹಳ್ಳವೊಂದು ಹರಿಯುತ್ತಿದೆ. ಈ ಹಳ್ಳ ಭಾರೀ ಮಳೆಗೆ ನೆರೆ ನೀರು ಮನೆಯನ್ನೂ ಆವರಿಸುತ್ತಿದ್ದರಿಂದ ಮಳೆಗಾಲ ಆರಂಭವಾದಾಗಿನಿಂದ ಗಿರಿಜಮ್ಮ ತಮ್ಮ ಸಂಬಂಧಿಕರ ಮನೆಗೆ ತೆರಳಿ ಅಲ್ಲೇ ನೆಲಸಿದ್ದರೆಂದು ತಿಳಿದು ಬಂದಿದೆ.

ಆದರೆ ಕಳೆದ ಗುರುವಾರ ಗಿರಿಜಮ್ಮ ಅವರ ಮನೆ ಸಮೀಪದಲ್ಲಿರುವ ಮೇಲ್ವರ್ಗದ ಕಾಫಿ ತೋಟವೊಂದರ ಮಾಲಕನ ಪತ್ನಿ ಪ್ರೇಮಾ ಎಂಬವರು ಮಹಿಳೆ ಮನೆಯಲ್ಲಿರುವುದು ಹಾಗೂ ಆಕೆಗೆ ಮಕ್ಕಳಿಲ್ಲದಿರುವುದನ್ನು ಗಮನಿಸಿ ಜಾಗ ಕಬಳಿಸುವ ಉದ್ದೇಶದಿಂದ ಜೆಸಿಬಿಯಿಂದ ಮನೆಯನ್ನು ಉರುಳಿಸಿದ್ದಾರೆ. ಅಲ್ಲದೇ ಮನೆಯ ಜಾಗ ಸಮತಟ್ಟು ಮಾಡಿ, ಮನೆಯಿದ್ದ ಜಾಗದಲ್ಲಿ ಕಾಫಿ, ಅಡಿಕೆ ಗಿಡಗಳನ್ನು ನೆಟ್ಟು ಜಾಗಕ್ಕೆ ಬೇಲಿ ಹಾಕಿದ್ದಾರೆಂದು ತಿಳಿದು ಬಂದಿದೆ. 

ಸುದ್ದಿ ತಿಳಿದ ಗಿರಿಜಮ್ಮ ತನ್ನ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರೇಮಾ ಅವರ ಬಳಿ ವಿಚಾರಿಸಿದಾದ ಆರಂಭದಲ್ಲಿ ಜಾಗ ತನ್ನದೆಂದು ಹೇಳಿ, ಮನೆಯನ್ನು ಕೆಡವಿಸಿದ್ದು ಯಾರೆಂದು ತಿಳಿದಿಲ್ಲ ಎಂದು ಗಿರಿಜಾರಿಗೆ ಹೇಳಿದ್ದರಿಂದ ಅವರು ಪ್ರೇಮಾ ವಿರುದ್ಧ ಆಲ್ದೂರು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಸ್ಥಳ ಪರಿಶೀಲಿಸಿದ ಪೊಲೀಸರು ಗ್ರಾಪಂ, ಕಂದಾಯಾಧಿಕಾರಿಗಳಿಂದ ಮಾಹಿತಿ ಪಡೆದು ಮನೆ ಹಾಗೂ ಜಾಗ ದಲಿತ ಮಹಿಳೆ ಗಿರಿಜಮ್ಮ ಅವರದ್ದೇ ಎಂದು ತಿಳಿದು ಬಂದಿದ್ದರಿಂದ ಆಲ್ದೂರು ಪೊಲೀಸರು ಪ್ರೇಮಾ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News