ರಾಜ್ಯವು ಒತ್ತಡದ ಪರಿಸ್ಥಿತಿಯಿಂದ ಬಹುಬೇಗ ಚೇತರಿಸಿಕೊಂಡಿದೆ: ಸಚಿವ ಜಗದೀಶ್ ಶೆಟ್ಟರ್

Update: 2020-11-21 16:10 GMT

ಬೆಂಗಳೂರು, ನ.21: ಇಡೀ ಜಗತ್ತು ಕೋವಿಡ್‍ನಿಂದ ತಲ್ಲಣಗೊಂಡಿದ್ದು, ಕೈಗಾರಿಕಾಭಿವೃದ್ಧಿ ಕುಂಠಿತವಾಗಿದೆ. ಆದರೆ, ಕರ್ನಾಟಕವು ಒತ್ತಡದ ಪರಿಸ್ಥಿತಿಯಿಂದ ಬಹುಬೇಗ ಚೇತರಿಸಿಕೊಂಡಿದ್ದು, ಈಗ ಎಲ್ಲವೂ ಸಹಜಸ್ಥಿತಿಗೆ ಮರಳಿದೆ. ಉತ್ಪಾದನೆಯೂ ಮೊದಲಿನ ಸ್ಥಿತಿಗೆ ಮರಳಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶನಿವಾರ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಡಿಜಿಟಲ್ ಆರ್ಥಿಕತೆಯ ಪರಿಕಲ್ಪನೆ ಅತ್ಯುತ್ತಮವಾಗಿ ನೆರವಿಗೆ ಬಂದಿದ್ದು, ಪ್ರಸ್ತುತ ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗವಾಗಿ ಆಗುತ್ತಿದೆ. ಇದರಿಂದ ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕನಿಗೆ ಹೆಚ್ಚು ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕವು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರತಿಪಾದಿಸಿದರು.

ಸರಕಾರವು ಈಗಾಗಲೇ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಮಾರ್ಟ್ ಪ್ರೊಡಕ್ಷನ್ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇದನ್ನು ಬಾಶ್, ಜನರಲ್ ಎಲೆಕ್ಟ್ರಿಕಲ್ಸ್, ಡಸಾಲ್ಟ್, ಸೀಮನ್ಸ್ ಕಂಪನಿಗಳ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ತಂತ್ರಜ್ಞಾನದ ಬೆಳವಣಿಗೆ ಹೆಚ್ಚಿದಂತೆಲ್ಲ ಸೈಬರ್ ಸೆಕ್ಯೂರಿಟಿಯ ಸವಾಲುಗಳೂ ಹೆಚ್ಚುತ್ತಿವೆ. ಇಂಥ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಎಲ್ಲ ರೀತಿಯ ಹೆಜ್ಜೆಗಳನ್ನೂ ಇಟ್ಟಿದೆ. ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಜಗತ್ತಿನೆಲ್ಲೆಡೆ ಡ್ರಗ್ ಸಾಗಣೆ, ಮಾನವ ಸಂಪನ್ಮೂಲ ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಅನೇಕ ವಿದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗೆಯೇ, ಆರ್ಥಿಕ ಅಪರಾಧಗಳು ನಡೆಯುತ್ತಿವೆ. ಇವೆಲ್ಲವನ್ನು ಹತ್ತಿಕ್ಕಲು ರಾಜ್ಯದಲ್ಲಿ ಸೈಬರ್ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸೈಬರ್ ಪೊಲೀಸರಿಗೆ ಎಲ್ಲ ರೀತಿಯ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೋವಿಡ್ ಸಂಕಷ್ಟದ ಹೊತ್ತಿನಲ್ಲಿ ತಂತ್ರಜ್ಞಾನವು ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪೂರಕವಾಯಿತು. ಈಗ ನಡೆಯುತ್ತಿರುವ ಆನ್‍ಲೈನ್ ತರಗತಿ ಸೇರಿದಂತೆ ಇಲಾಖೆಯ ಬಹುತೇಕ ಚಟುವಟಿಕೆಗಳು ಆನ್‍ಲೈನ್ ಮೂಲಕವೇ ನಡೆಯುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಎಲ್ಲರಿಗೂ ಗೊತ್ತಿರುವಂತೆ, ಕರ್ನಾಟಕವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ಪರಂಪರೆ ಮುಂದೆಯೂ ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕ್ಷಿಪ್ರಗತಿಯಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿದೆ. ಹಾಗೆ ನೋಡಿದರೆ, ಈ ನೀತಿಯನ್ನು ಮೊತ್ತ ಮೊದಲು ಜಾರಿ ಮಾಡಲು ರಾಜ್ಯ ಕರ್ನಾಟಕವೇ ಆಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸುಳ್ಳು ಸುದ್ದಿ ವಿರುದ್ಧ ಕ್ರಮ

ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಫೇಕ್ ನ್ಯೂಸ್(ಸುಳ್ಳು ಸುದ್ದಿ) ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ವಾಟ್ಸ್‍ಅಪ್, ಟಿಟ್ಟರ್, ಇನ್ಸ್‍ಟಾಗ್ರಾಂ, ಫೇಸ್‍ಬುಕ್, ಯುಟ್ಯೂಬ್ ಸೇರಿದಂತೆ ಆನ್‍ಲೈನ್ ಫ್ಲಾಟ್‍ಫಾರಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಎಲ್ಲ ಸುಳ್ಳುಸುದ್ದಿಗಳನ್ನು ಹರಡುವುದನ್ನು ತಡೆಯಲಾಗುವುದು.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News