ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಬಿಗಡಾಯಿಸಿದ ಟ್ರಾಫಿಕ್ ಸಮಸ್ಯೆ

Update: 2020-11-21 16:36 GMT

ಶಿವಮೊಗ್ಗ, ನ.21: ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ದುಸ್ತರವಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳು ಹಾಗೂ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯಾಗುತ್ತಿದೆ. ಸದ್ಯ ನಗರಾದ್ಯಂತ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ, ಯುಜಿಸಿ, ಕುಡಿಯುವ ನೀರು, ರಸ್ತೆ ಕಾಮಗಾರಿಗಳಿಂದ, ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಷ್ಟು ದುಸ್ತರವಾಗಿ ಪರಿಣಮಿಸಿದೆ.

ನಗರದ ಸಣ್ಣಪುಟ್ಟ ರಸ್ತೆಗಳು, ಜನವಸತಿ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿಯೂ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಕುವೆಂಪು ರಸ್ತೆ, ದುರ್ಗಿಗುಡಿ, ತಿಲಕ್ನಗರ ಮುಖ್ಯರಸ್ತೆ, ರತ್ನಮ್ಮ ಮಾಧವರಾವ್ ರಸ್ತೆ, ಪಾರ್ಕ್ ಬಡಾವಣೆ ಮುಖ್ಯ ರಸ್ತೆ, ಆರ್ಟಿಓ ರಸ್ತೆ, ಜೆಪಿಎನ್ ರಸ್ತೆ, ಎಲ್ಎಲ್ಆರ್ ರಸ್ತೆ, ಜೈಲ್ ರಸ್ತೆ, ಗಾರ್ಡನ್ ಏರಿಯಾ ತಿರುವುಗಳು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದುರಿನ ರಸ್ತೆ, ಗಾಂಧಿಬಜಾರ್ ಸುತ್ತಮುತ್ತಲಿನ ರಸ್ತೆ, ಕೆ.ಆರ್.ಪುರಂ, ಓ.ಟಿ.ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆಯಿದೆ. ನಿತ್ಯದ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿರುವ ಜನತೆ ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವು ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಕೆಲ ರಸ್ತೆಗಳಲ್ಲಂತೂ ಪಾದಚಾರಿ ಮಾರ್ಗಗಳೇ ಪಾರ್ಕಿಂಗ್ ತಾಣವಾಗಿದೆ. ಮತ್ತೆ ಕೆಲವೆಡೆ ಒತ್ತುವರಿಯಾಗಿವೆ. ಕೆಲ ವಾಣಿಜ್ಯ ಸಂಕೀರ್ಣಗಳು ಫುಟ್ಪಾತ್ ಗಳನ್ನು ಅತಿಕ್ರಮಿಸಿ, ತಮ್ಮ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಡಿಸಿಕೊಂಡಿವೆ ಎಂದು ನಾಗರಿಕರ ಆರೋಪಿಸುತ್ತಾರೆ.

ನಗರದ ಹೃದಯಭಾಗಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಆದರೆ ಇವರು ಯಾರೂ ತಮ್ಮಲ್ಲಿಗೆ ಬರುವ ನಾಗರಿಕರಿಗೆ ತಮ್ಮ ಕಟ್ಟಡಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುತ್ತಿಲ್ಲ. ಇದರಿಂದ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಮನೆಯಿಂದ ವಾಹನ ಹೊರ ತೆಗೆಯಲು, ಒಳ ಕೊಂಡೊಯ್ಯಲು ಸಂಕಷ್ಟ ಪಡುವಂತಾಗಿದೆ. ಮನೆ ಮುಂಭಾಗ ನಿಲ್ಲಿಸಬೇಡಿ ಎಂದು ಹೇಳಲು ಹೋದರೆ, ಕೆಲ ವಾಹನ ಚಾಲಕರು ಗಲಾಟೆ ಮಾಡಿದ ಉದಾಹರಣೆಗಳು ಇವೆ ಎಂದು ಸಾರ್ವಜನಿಕರು ದೂರುತ್ತಾರೆ.

ಇನ್ನಾದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕು. ನಗರ ಸಂಚಾರ ಹಾಗೂ ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ  ದೂರದೃಷ್ಟಿ ಕಾರ್ಯಗಳ ಮೂಲಕ, ದಿಟ್ಟ ನಿರ್ಧಾರ ಕೈಗೊಂಡು ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಲಿವೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಕನ್ಸರ್ವೆನ್ಸಿಗಳಲ್ಲಿ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳುತ್ತಿಲ್ಲವೇಕೆ ?
ನಗರದ ಪ್ರಮುಖ ರಸ್ತೆಗಳ ಕನ್ಸರ್ವೆನ್ಸಿಗಳನ್ನು ಅಭಿವೃದ್ದಿಗೊಳಿಸಿ, ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಮಹಾನಗರ ಪಾಲಿಕೆ ಆಡಳಿತ ನಿರ್ಧರಿಸಿದೆ. ಈಗಾಗಲೇ ನಗರದ ಹಲವೆಡೆ ಕನ್ಸರ್ವೆನ್ಸಿಗಳನ್ನು ಅಭಿವೃದ್ದಿಗೊಳಿಸಲಾಗಿದೆ. ಮತ್ತೆ ಕೆಲವೆಡೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಆದರೆ ಕೆಲ ಕನ್ಸರ್ವೆನ್ಸಿ ಹೊರತುಪಡಿಸಿ, ಉಳಿದ ಕನ್ಸರ್ವೆನ್ಸಿಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಪಾಲಿಕೆ ಆಡಳಿತ ಸೂಕ್ತ ಕ್ರಮಕೈಗೊಂಡಿಲ್ಲ. ಇದರಿಂದ ನಗರದ ಹಲವು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬೈಕ್, ಕಾರು ಮತ್ತಿತರ ವಾಹನಗಳ ನಿಲುಗಡೆ  ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಟ್ರಾಫಿಕ್ ಸಮಸ್ಯೆಯಿಂದ ವಾಹನ ಚಾಲನೆ ಕಷ್ಟವಾಗುತ್ತಿದೆ.ಅಂಡರ್ ಪಾಸ್ ಇದ್ದರೂ ಸಾರ್ವಜನಿಕ ಸೇವೆಗೆ ಮಹಾನಗರ ಪಾಲಿಕೆ ಕೊಡುತ್ತಿಲ್ಲ.ನಗರದಲ್ಲಿರುವ ಎಲ್ಲಾ ಫುಟ್ಪಾತ್ಗಳ ಮೇಲೆ ಅಂಗಡಿ ವ್ಯಾಪಾರ ಮಾಡುತ್ತಿದ್ದಾರೆ.ಜೊತೆಗೆ ವಾಹನಗಳನ್ನು ಪುಟ್ಪಾತ್ ಮೇಲೆ ನಿಲ್ಲಿಸುತ್ತಿದ್ದಾರೆ.ಸ್ಮಾಟ್ಸಿಟಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ತೆಗೆದುವುದರಿಂದ ಏಕಮುಖ ಸಂಚಾರ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.
-ಆದಿತ್ಯ ಕಾಮತ್, ಸಾರ್ವಜನಿಕ

ಎಲ್ಲೆಲ್ಲೆ ಪಾರ್ಕಿಂಗ್ ಸಮಸ್ಯೆ
ಕುವೆಂಪು ರಸ್ತೆ, ದುರ್ಗಿಗುಡಿ, ತಿಲಕ್ನಗರ ಮುಖ್ಯರಸ್ತೆ, ರತ್ನಮ್ಮ ಮಾಧವರಾವ್ ರಸ್ತೆ, ಪಾರ್ಕ್ ಬಡಾವಣೆ ಮುಖ್ಯ ರಸ್ತೆ, ಆರ್ಟಿಓ ರಸ್ತೆ, ಜೆಪಿಎನ್ ರಸ್ತೆ, ಎಲ್ಎಲ್ಆರ್ ರಸ್ತೆ, ಜೈಲ್ ರಸ್ತೆ, ಗಾರ್ಡನ್ ಏರಿಯಾ ತಿರುವುಗಳು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದುರಿನ ರಸ್ತೆ, ಗಾಂಧಿಬಜಾರ್ ಸುತ್ತಮುತ್ತಲಿನ ರಸ್ತೆ, ಕೆ.ಆರ್.ಪುರಂ, ಓ.ಟಿ.ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆಯಿದೆ.

Writer - ಶರತ್ ಕುಮಾರ್

contributor

Editor - ಶರತ್ ಕುಮಾರ್

contributor

Similar News