ಸರಕಾರಿ ಆಸ್ಪತ್ರೆಗಳಲ್ಲಿಯೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ಜಾವೇದ್ ಅಖ್ತರ್

Update: 2020-11-21 17:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.21: ಕೋವಿಡ್ ಸೋಂಕಿತರ ಒಳರೋಗಿ ಚಿಕಿತ್ಸೆಗಾಗಿ ಬೆಡ್‍ಗಳ ಮರು ಹಂಚಿಕೆ ಮಾಡಲಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಕೋವಿಡ್ ಬೆಡ್‍ಗಳು ಭರ್ತಿಯಾದ ನಂತರವೇ ಖಾಸಗಿ ಆಸ್ಪತ್ರೆಗಳಿಗೆ ಕಳಹಿಸಲಾಗುವುದೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಇಲಾಖೆಯು, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಡಿಯಲ್ಲಿ ನೋಂದಾಯಿತಗೊಂಡ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಪ್ರಾಧಿಕಾರಿಗಳು ಸೂಚಿಸುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸೂಚಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ತೀವ್ರತರವಾದ ಸೋಂಕಿದ್ದು, ಹೆಚ್ಚಿನ ಪರಿಣಾಮಕಾರಿ ಚಿಕಿತ್ಸೆ ಅವಶ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ತೆ ಬಳಸಿಕೊಳ್ಳಬಹುದಾಗಿದೆ. ಅವಶ್ಯಕತೆಗನುಗುಣವಾಗಿ ಖಾಸಗಿ ಆಸ್ಪತ್ರೆಯ ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯಗಳಿಗಾಗಿ ಹಾಸಿಗೆ ಹಂಚಿಕೆ ಮಾಡಬಹುದು. ಹೀಗಾಗಿ ತಾತ್ಕಾಲಿಕವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಂಚಿಕೆಯಾಗುತ್ತಿದ್ದ ಹಾಸಿಗೆ ವ್ಯವಸ್ಥೆಯನ್ನು ಜನರಲ್ ಮತ್ತು ಎಚ್‍ಡಿಯು ಬೆಡ್‍ಗಳ ಹಂಚಿಕೆ ವ್ಯವಸ್ಥೆಯನ್ನು ಮಾರ್ಪಾಡು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News