ಯಡಿಯೂರಪ್ಪರನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ: ರೇಣುಕಾಚಾರ್ಯ

Update: 2020-11-22 11:41 GMT

ಬೆಂಗಳೂರು, ನ.22: ಕನ್ನಡ ನಾಡು, ನುಡಿಯ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಕನ್ನಡಪರ ಹೋರಾಟಗಾರರಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಾ ಅಭಿವೃದ್ದಿ ನಿಗಮ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಟೀಕಿಸಿರುವ ವಾಟಾಳ್ ನಾಗರಾಜ್ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯತ್ನಾಳ್‍ಗೆ ಬೆಂಬಲ: ರಾಜ್ಯ ಸರಕಾರ ಮರಾಠಾ ಅಭಿವೃದ್ಧಿ ನಿಗಮ ರಚಿಸಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5ಕ್ಕೆ ರಾಜ್ಯ ಬಂದ್‍ಗೆ ಕರೆ ನೀಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರೋಲ್‍ಕಾಲ್ ಹೋರಾಟಗಾರರಿಗೆ ಯಡಿಯೂರಪ್ಪ ಹೆದರಬೇಕಿಲ್ಲವೆಂದು ಸರಿಯಾದ ರೀತಿಯಲ್ಲಿಯೇ ತಿರುಗೇಟು ನೀಡಿದ್ದಾರೆ. ಇವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆಂದು ಅವರು ಹೇಳಿದರು.

ರಾಜ್ಯ ಸರಕಾರಕ್ಕೆ ಕನ್ನಡ ನಾಡು ನುಡಿಯ ಬಗ್ಗೆ ಬದ್ಧತೆ ಇದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸುತ್ತಾರೆ. ವಾಟಾಳ್ ನಾಗರಾಜ್‍ರಿಂದ ಕಲಿಯಬೇಕಾದ ಅಗತ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News