ಬೆಳಗಾವಿ ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಿಂದ ಹಿಂದೆ ಸರಿದ ಜೆಡಿಎಸ್

Update: 2020-11-22 11:46 GMT

ಬೆಂಗಳೂರು, ನ. 22: ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಕಣದಿಂದ ದೂರ ಉಳಿಯಲು ಜಾತ್ಯತೀತ ಜನತಾ ದಳ (ಜೆಡಿಎಸ್) ತೀರ್ಮಾನಿಸಿದೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ತೀರ್ಮಾನವನ್ನು ಕೈಗೊಂಡಿದೆ ಎಂದು ಹೇಳಿದರು.

ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಪಕ್ಷದ ಸ್ಪರ್ಧೆಯಿಂದ ನಮಗೆ ಯಾವುದೇ ಲಾಭವಿಲ್ಲ. ಹೀಗಾಗಿ ಶೀಘ್ರದಲ್ಲೆ ಈ ಸಂಬಂಧ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಪ್ರಕಟಿಸಲಾಗುವುದು ಎಂದರು.

ಕೆಲ ದಿನಗಳ ಹಿಂದೆ ನಡೆದ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಠೇವಣಿ ಕಳೆದುಕೊಂಡಿದ್ದರು. ಶಿರಾ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯಾಗಿದ್ದರೂ ಪಕ್ಷದ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News