ಸೇವೆ ಮಾಡಿದರೂ ಜನ ನನ್ನ ಕೈ ಹಿಡಿಯುತ್ತಿಲ್ಲ ಎಂದು ಅಳಲು ತೋಡಿಕೊಂಡ ಕುಮಾರಸ್ವಾಮಿ

Update: 2020-11-22 13:47 GMT

ಬೆಂಗಳೂರು, ನ. 22: "ನಾನು ಅತ್ಯಂತ ಶ್ರಮ ವಹಿಸಿ ಸೇವೆ ಮಾಡಿದರೂ ಜನತೆ ನನ್ನ ಕೈಹಿಡಿಯುತ್ತಿಲ್ಲ. ಆದರೆ, ಏನು ಕೆಲಸ ಮಾಡದವರನ್ನು ಓಟು ಹಾಕಿ ಗೆಲ್ಲಿಸುತ್ತಾರೆ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ದಾಸರಹಳ್ಳಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದೆ. ಹಲವು ಯೋಜನೆಗಳನ್ನ ನೀಡಿದೆ. ಕೆರೆಗಳನ್ನು ನುಂಗಿದ ಕೆಲ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಂಡಿದ್ದೆ ಎಂದು ಹೇಳಿದರು.

ಆದರೆ, ಜನತೆ ಉಪ ಚುನಾವಣೆಯಲ್ಲಿ ನನ್ನ ಕೈಹಿಡಿಯಲಿಲ್ಲ. ಏನೂ ಕೆಲಸವನ್ನು ಮಾಡದವರಿಗೆ ಜನತೆ ಮತ ನೀಡುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡ ಅವರು, ಬಿಜೆಪಿ ಹಾಗೂ ಕಾಂಗ್ರೆಸ್‍ನಿಂದ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಲಾಗಿದೆ. ಆದರೆ, ನನ್ನ ಅವಧಿಯಲ್ಲಿ ಎಂದೂ ಭ್ರಷ್ಟಾಚಾರ ನಡೆಸಲಿಲ್ಲ ಎಂದು ಹೇಳಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿಯ ಕುರಿತು ದೂರದೃಷ್ಟಿ ಇಲ್ಲ ಎಂದು ದೂರಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ನಾನು ಪಟ್ಟ ಹಿಂಸೆ ನನಗೆ ಮಾತ್ರವೇ ಗೊತ್ತು. ಆ ವೇಳೆ ರಾಜ್ಯದ ಅಭಿವೃದ್ಧಿಗೆ ಅವಕಾಶ ಸಿಗಲಿಲ್ಲ. ಆದರೂ, ಜನಪರವಾಗಿ ಕೆಲಸ ಮಾಡಿದ್ದೇನೆ ಎಂದರು.

ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪವಿದೆ. ಈ ಹಿಂದೆ ಆಡಳಿತದಲ್ಲಿದ್ದ ಸಿದ್ದರಾಮಯ್ಯನವರ ಸರಕಾರದ ಬಗ್ಗೆ ಖುದ್ದು ಪ್ರಧಾನಿ ಮೋದಿಯವರೆ ಕಮಿಷನ್ ಸರಕಾರ ಎಂದು ದೂರಿದ್ದರು. ಆದರೆ, ನನ್ನ ನೇತೃತ್ವದ ಸರಕಾರದ ಬಗ್ಗೆ ಯಾರೂ ಭ್ರಷ್ಟ ಸರಕಾರ ಎಂದು ಟೀಕಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News