ಪ್ರಧಾನಿ ಮೋದಿ ಯುಗಾಂತ್ಯ ಪ್ರಾರಂಭ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು

Update: 2020-11-22 16:34 GMT

ಮೈಸೂರು,ನ.22: ದೀರ್ಘ ಸುಮಂಗಲಿ ಸಿದ್ದಲಿಂಗಯ್ಯ ಆಗಬೇಡಿ. ದೇವನೂರ ಮಹಾದೇವರಂತಾಗಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಚಂದು ಸಾಹೇಬ ಅವರ “ಒಡಲ ದನಿ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ದಲಿಂಗಯ್ಯ ಅಲ್ಲೂ ಹೋಗಿ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಮುಂದಿನ ವರ್ಷ ಜಾ.ದಳ ಬರುತ್ತೆ, ಅಲ್ಲೊಂದು ತಾಳಿ, ಅಲ್ಲೊಂದು ಪದವಿ. ಈಗ ಬಿಜೆಪಿ ಬಂದಿದೆ- ಈಗ ಮೂರನೇ ತಾಳಿ ಅವರ ಕುತ್ತಿಗೆಯಲ್ಲಿದೆ. ಇನ್ನೊಂದು ಪದವಿ ಸಿಕ್ಕಿದೆ. ಯಾಕೆ ಈ ಥರ ತಾಳಿ ಚೇಂಜ್ ಮಾಡೋದು? ಸಿದ್ಧಾಂತ ಚೇಂಜ್ ಮಾಡೋದು? ಬದ್ಧತೆ ಚೇಂಜ್ ಮಾಡೋದು? ಯುವಕರು ಸಿದ್ದಲಿಂಗಯ್ಯನವರ ಸಿದ್ಧಾಂತವನ್ನು ಫಾಲೋ ಮಾಡಬೇಡಿ. ದೇವನೂರ ಮಹಾದೇವರನ್ನು ಫಾಲೋ ಮಾಡಿ ಎಂದು ಕರೆ ನೀಡಿದರು.

ಅಂದಿನಿಂದ ಇಂದಿನವರೆಗೂ ದೇವನೂರ ಮಹಾದೇವ ಅವರು ಬದಲಾಗಿಲ್ಲ. ಸಿಎಎ, ಎನ್‍ಆರ್‍ಸಿ ಯಾವುದೇ ಬಂದರೂ ಈ ವಯಸ್ಸಲ್ಲೂ ಚಳಿ ಬಿಟ್ಟು ಹೋರಾಟ ಮಾಡುತ್ತಾರೆ. ಈಗಲೂ ಅವರು ಮೋದಿ ಸರ್ಕಾರವನ್ನು ಉಗ್ರವಾಗಿ, ಗೌರವಯುತವಾಗಿ, ಪ್ರಜಾಸತ್ತಾತ್ಮಕವಾಗಿ ಟೀಕೆ ಮಾಡುತ್ತಾರೆ. ಸಿದ್ದಲಿಂಗಯ್ಯನವರಂತೆ ಸೈಲೆಂಟಾಗಿಲ್ಲ. ದೇವನೂರರಂತ ಸಾಹಿತಿಗಳು, ಹೃದಯ ಶ್ರೀಮಂತಿಕೆ ಉಳ್ಳವರು ಬೇಕಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮೋದಿಯ ಯುಗಾಂತ್ಯ ಆರಂಭವಾಗಿದೆ ಎಂಬುದನ್ನು ಬಿಹಾರ ಚುನಾವಣೆ ಸಾಬೀತು ಮಾಡಿದೆ. ಒವೈಸಿಯಂತಹ ಒಬ್ಬ ಬಿಜೆಪಿ ಚೇಲಾ, ಚಿರಾಗ್ ಪಾಸ್ವಾನ್‍ನಂತಹ ಅಂಬೇಡ್ಕರ್ ದ್ರೋಹಿಯಿಂದಾಗಿ ಬಿಹಾರದಲ್ಲಿ ಬಿಜೆಪಿ ಗೆದ್ದಿದೆ. ಗುಲಾಮರು ಇರುತ್ತಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಪೂರ್ಣಯ್ಯ, ಮೀರ್ ಸಾದಿಕ್‍ನಂಥವರು ಇದ್ದರು ಎಂದರು.

ಪತ್ರಕರ್ತ ಕೆ.ದೀಪಕ್ ಕೃತಿ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ಎಸ್.ಮರಿದೇವಯ್ಯ, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಮ್, ಕೃತಿಯ ಕರ್ತೃ ಚಂದು ಸಾಹೇಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News