ಬಲವಂತದ ಬಂದ್ ಮಾಡಿದರೆ ಪೊಲೀಸರಿಗೆ ಒಪ್ಪಿಸುತ್ತೇವೆ: ಕನ್ನಡ ಸಂಘಟನೆಗಳ ಮುಖಂಡರಿಗೆ ಯತ್ನಾಳ್ ಬೆಂಬಲಿಗರ ಎಚ್ಚರಿಕೆ

Update: 2020-11-22 17:07 GMT

ವಿಜಯಪುರ, ನ. 22: "ಮಿಸ್ಟರ್ ವಾಟಾಳ್ ನಾಗರಾಜ್, ನಾರಾಯಣ ಗೌಡ, ಸಾ.ರಾ. ಗೋವಿಂದು ಡಿ.5ಕ್ಕೆ ವಿಜಯಪುರ ನಗರದಲ್ಲಿ ಬಲವಂತದ ಬಂದ್ ಮಾಡಿದರೆ ನಿಮ್ಮ ಕತ್ತು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಸಿದ್ದೇಶ್ವರ ದೇವಾಲಯದ ಮುಂಭಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಶಾಸಕ ಯತ್ನಾಳ್ ಬೆಂಬಲಿಗರು, ಯತ್ನಾಳ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ದೇಶಪ್ರೇಮಿ ಮರಾಠಿಗರಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, 50 ಕೋಟಿ ರೂ. ಅನುದಾನ ನೀಡಿದ್ದು ಸರಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದಿದ್ದಾರೆ.

ಮರಾಠಿಗರು ಕನ್ನಡ ಪ್ರೇಮಿಗಳು. ಬೆಳಗಾವಿ, ನಿಪ್ಪಾಣಿ ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರಿಲ್ಲ. ಅವು ಎಂದಿದ್ದರೂ ಕರ್ನಾಟಕಕ್ಕೆ ಸೇರಿದ್ದು, ನಾವು ಎಂಇಎಸ್ ಬೆಂಬಲಿಗರಲ್ಲ. ಮಹಾರಾಷ್ಟ್ರದ ಮುಖಂಡರ ದ್ವೇಷದ ಹೇಳಿಕೆಗಳಿಗೂ ನಮ್ಮ ಬೆಂಬಲವಿಲ್ಲ ಎಂದ ಅವರು, ಅನಗತ್ಯ ಬಂದ್ ಕರೆ ನೀಡಿದರೆ ಬಡ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

ವಿಜಯಪುರ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕದ ಯೋಗಿ ಆದಿತ್ಯನಾಥ್. ಡಿಸೆಂಬರ್ 5ರಂದು ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್‍ಗೆ ಕನ್ನಡಿಗರು ಬೆಂಬಲ ನೀಡಬಾರದು. ಅಲ್ಲದೆ, ಚಿತ್ರನಟರು ಯಾವುದೇ ಕಾರಣಕ್ಕೂ ಬಂದ್‍ನಲ್ಲಿ ಪಾಲ್ಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಎಲ್ಲ ವಿಚಾರಗಳಿಗೂ ಬಂದ್ ಕರೆ ನೀಡುವ ವಾಟಾಳ್ ನಾಗರಾಜ್ ಅವರ ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಯತ್ನಾಳ್ ಬೆಂಬಲಿಗರು, ಪುಂಡರು ಕರೆ ನೀಡಿರುವ ಡಿ.5ರ ಬಂದ್‍ಗೆ ಬೆಂಬಲ ನೀಡಬೇಡಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News