ಪಕ್ಷ ಸಂಘಟನೆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರೋಣ: ಡಿ.ಕೆ.ಶಿವಕುಮಾರ್

Update: 2020-11-22 17:13 GMT

ಬಳ್ಳಾರಿ, ಸೆ. 22: ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ನಾವೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ. ಅದಕ್ಕಾಗಿ ನಾನು ಇಲ್ಲಿಂದ ಪ್ರವಾಸ ಆರಂಭ ಮಾಡಿದ್ದು, ಇದು ಕಾಂಗ್ರೆಸ್ ಪಾಲಿಗೆ ವಿಜಯದ ನಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರವಿವಾರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಶಾಸಕರು, ಪರಾಜಿತರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಇಂದು ಇಲ್ಲಿ ಸೇರಿದ್ದನ್ನು ನೋಡಿದರೆ ತಿಳಿಯುತ್ತದೆ.

ಎಲ್ಲ ಹಂತದ ನಾಯಕರು ಜನರನ್ನು ಸೇರಿಸುತ್ತಾರೆ. ಆದರೆ ಪಕ್ಷದ ಬಲವರ್ಧನೆ ಆಗುತ್ತಿಲ್ಲ. ಈಗ ಇರುವ ಆತ್ಮವಿಶ್ವಾಸ ಬರುವ ಚುನಾವಣೆಗಳಲ್ಲಿ ಇರಬೇಕು. ಜಿಲ್ಲೆಯ ಹತ್ತೂ ಕ್ಷೇತ್ರಗಳಲ್ಲೀ ಪಕ್ಷ ಗೆಲ್ಲುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯ ಕಾಂಗ್ರೆಸ್ ಗೆ ಬಳ್ಳಾರಿ ಕಾರ್ಯಕರ್ತರು ತೋರಿಸಿದ್ದೀರಿ. ನಮ್ಮದು ಕಾರ್ಯಕರ್ತರನ್ನೊಳಗೊಂಡ ಪಕ್ಷವಾಗಬೇಕಿದೆ. ಆ ಮೂಲಕ ಪಕ್ಷ ಇನ್ನಷ್ಟು ಗಟ್ಟಿ ಆಗುವಂತೆ ಮಾಡಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷನಾದರೂ ಓರ್ವ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯಲು ನಾನು ಸಿದ್ಧ. ನಮ್ಮ ಚುನಾವಣೆ ವೇಳೆ ನಮ್ಮ ಗೆಲುವಿಗಾಗಿ ನೀವು ಹೇಗೆ ಶ್ರಮಿಸುತ್ತೀರೋ ಅದೇ ರೀತಿ ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಉಪಚುನಾಣೆಗಳಲ್ಲಿ ಕಾಂಗ್ರೆಸ್ ಗೆ ಆದ ಸೋಲನ್ನು ಒಪ್ಪಿಕೊಳ್ಳೋಣ. ಆ ಚುನಾವಣೆಗಳಲ್ಲಿ ಪಕ್ಷ ಯಾಕೆ ಸೋತಿತು ಎಂದು ಚಿಂತಿಸಬೇಡಿ. ಅದರ ಕುರಿತು ನಾವು ತೀರ್ಮಾನ ಮಾಡುತ್ತೇವೆ. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲೂ ಎಲ್ಲಾ ಹಂತದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಸಮಾಧಾನ ತರಿಸಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ ಫಲವಾಗಿ ಉಗ್ರಪ್ಪ ಲಕ್ಷ ಓಟುಗಳ ಅಂತರದಿಂದ ಗೆದ್ದರು. ಇದಕ್ಕೆಲ್ಲ ನಿಮ್ಮ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.

ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬರುವ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಾನು ತೀರ್ಮಾನ ಮಾಡಲ್ಲ. ನೀವೇ ತೀರ್ಮಾನ ಮಾಡಿ ಸೂಚಿಸಿದ ಹೆಸರಿನವರಿಗೆ ಟಿಕೆಟ್ ಕೊಡುತ್ತೇವೆ. ಕೆಳ ಹಂತದಿಂದ ಲೋಕಸಭಾ ಚುನಾವಣೆಗಳಲ್ಲಿ ಶ್ರಮವಹಿಸಿ ಚುನಾವಣೆ ನಡೆಸದೆ ಕೇವಲ ನಾಯಕರ ಬಾಲ ಹಿಡಿದು ಟಿಕೆಟ್ ಕೇಳಿದರೆ ಅದಕ್ಕೆ ರಾಹುಲ್ ಗಾಂಧಿ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಬೇರೆ ಪಕ್ಷದವರು ಕಾಂಗ್ರೆಸ್ ಸೇರುತ್ತಿದ್ದಾರೆ. ಇದು ಕಾಂಗ್ರೆಸ್ ಮೇಲೆ ಜನತೆ ಇಟ್ಟ ನಂಬಿಕೆಯಾಗಿದೆ ಎಂದು ಶಿವಕುಮಾರ್ ಹೇಳಿದರು.

ಮಸ್ಕಿ ಕ್ಷೇತ್ರದಲ್ಲಿ ಬಸವಗೌಡ ತುರ್ವಿಹಾಳ ಅಧಿಕೃತವಾಗಿ ನಾಳೆ ಪಕ್ಷ ಸೇರಲಿದ್ದಾರೆ. ಕಾಂಗ್ರೆಸ್ ಎಂದರೆ ಅದು ದೇಶದ ಶಕ್ತಿಯಾಗಿದೆ. ಬಿಜೆಪಿ, ಜೆಡಿಎಸ್ ನವರು ಕಾಂಗ್ರೆಸ್ ಸೇರಲು ಅನೇಕರು ನನ್ನನ್ನು ಭೇಟಿ ಆಗಿದ್ದಾರೆ. ಆಯಾ ಜಿಲ್ಲೆಗಳ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಟಿಕೆಟ್ ಕೊಡಲೇಬೇಕು ಎನ್ನುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಆದರೆ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿದ್ದು, ದುಡಿಯುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ: ಬಿಜೆಪಿ ಸರಕಾರ ವಿದ್ಯುತ್ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದೆ. ಇದು ಬಡಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಕೋವಿಡ್ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಕೇವಲ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಣವನ್ನೇ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಸಕ ಭೀಮನಾಯ್ಕ್, ಜೆ.ಎನ್. ಗಣೇಶ್, ಈ. ತುಕಾರಾಂ, ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಅನಿಲ್ ಲಾಡ್ ಸೇರಿದಂತೆ ಹಲವರಿದ್ದರು.

ಸಿಎಎ, ಎನ್‍ಆರ್‍ಸಿ ಜಾರಿಗೆ ತಂದು ಬಿಜೆಪಿ ದೇಶವನ್ನು ಇಬ್ಭಾಗ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರ ಸಂವಿಧಾನ ಆಶಯದಂತೆ ಮತ್ತೊಮ್ಮೆ ದೇಶವನ್ನು ಒಂದು ಮಾಡುವ ಕೆಲಸ ಮಾಡೋಣ. ಅಂತಹ ಶಕ್ತಿ ಇರುವುದು ಕಾಂಗ್ರೆಸ್ ಗೆ. ನಾಯಕರು, ಕಾರ್ಯಕರ್ತರಲ್ಲಿ ಏನೇ ಭಿನ್ನಾಭಿಪ್ರಾಯಗಳು ಇರಲಿ ಅವುಗಳನ್ನು ತೋರ್ಪಡಿಸದೇ ಒಗ್ಗಟ್ಟು ಪ್ರದರ್ಶನ ಮಾಡೋಣ. ಬಿಜೆಪಿಯು ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ.

- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಸಿಬಿಐ ಬಿಜೆಪಿಯ ಕೆಲಸ ಮಾಡುತ್ತಿದೆ. ಬಿಜೆಪಿ ಸಿಬಿಐ ಮೂಲಕ ನನ್ನ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಯಾರು ಏನು ಬೇಕಾದರೂ ಮಾಡಲಿ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News