ಹಬ್ಬ, ಜಾತ್ರೆ ಹೆಸರಿನಲ್ಲಿನ ದುಂದುವೆಚ್ಚ ಬಿಟ್ಟು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಸತೀಶ್ ಜಾರಕಿಹೊಳಿ

Update: 2020-11-22 17:32 GMT

ಬೆಳಗಾವಿ, ನ. 22: ಪೋಷಕರು ತಮ್ಮ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಹಬ್ಬ, ಜಾತ್ರೆ ಹೆಸರಿನಲ್ಲಿನ ದುಂದು ವೆಚ್ಚ ಮಾಡುವ ಹಣವನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ, ಇದರಿಂದ ಅವರ ಭವಿಷ್ಯ ರೂಪಗೊಳ್ಳುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ರವಿವಾರ ಜಿಲ್ಲೆಯ ಗೋಕಾಕ್ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿರುವ ದಲಿತ ಸಮುದಾಯದ ಜನರು ಎಲ್ಲ ರಂಗದಿಂದ ವಂಚಿತರಾಗಿದ್ದು, ಬೇರೆಯವರೆ ಏಳ್ಗೆಯನ್ನು ಬಯಸದೆ ತಮ್ಮ ಏಳ್ಗೆಗೆಗೆ ಪ್ರಯತ್ನ ಪಡೆಯಬೇಕು. ಸತ್ತಾಗ, ಪೂಜೆ ಮಾಡುವ ವೇಳೆ ಹೇಳುವ ತಿಳಿಯದ ಮಂತ್ರವನ್ನು ಸ್ವೀಕರಿಸಿದ್ದೇವೆ ಎಂದ ಅವರು, ಮೊದಲು ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಬೇಕು. ಇತಿಹಾಸ ತಿಳಿಯದವರು ಬದುಕುವುದು ಕಷ್ಟ. ಎಷ್ಟೇ ಹಣ, ಅಂತಸ್ತು ಮಾಡಿದರು ಪ್ರಯೋಜನವಿಲ್ಲ' ಎಂದರು.

ಶೋಷಿತರಲ್ಲಿನ ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣ ಸೇರಿದಂತೆ ಹಲವು ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೆಲ್ಲರೂ ಮುನ್ನಡೆಯಬೇಕು ಎಂದ ಸತೀಶ್ ಜಾರಕಿಹೊಳಿ, ಯಾವುದೋ ಒಂದು ದೇವರ ಹೆಸರಿನಲ್ಲಿ ದೇವದಾಸಿ ಆಗುವ ಅನಿಷ್ಟ ಪದ್ಧತಿ, ಮೂಢನಂಬಿಕೆಯಿಂದ ಹೊರ ಬನ್ನಿ. ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡುವತ್ತ ಹೆಜ್ಜೆ ಹಾಕಿ ಎಂದು ಸೂಚಿಸಿದರು.

ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುವುದು ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಾಗಿತ್ತು. ಅದೇ ರೀತಿ ನೀವು ನಿಮ್ಮ ಹಕ್ಕುಗಳನ್ನು ಪಡೆದು ಎಲ್ಲರಂತೆ ಬದುಕಲು ಪ್ರಯತ್ನಿಸಿ. ಜತೆಗೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನ ಗೌರವಿಸಿ, ರಕ್ಷಣೆ ಮಾಡಬೇಕು. ಬದಲಾವಣೆ ಮಾಡಲು ಮುಂದಾದರೆ ಅದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯಬೇಕು ಎಂದರು.

ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ, ಮಾದಿಗ ಸಮಾಜ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಕಾಡಾಪುರ, ಸ್ಥಳಿಯ ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News