ಸಂಪುಟದಿಂದ ಕೆಲ ಸಚಿವರನ್ನು ಕೈಬಿಡುವಂತೆ ಪ್ರಸ್ತಾಪ: ರೇಣುಕಾಚಾರ್ಯ

Update: 2020-11-22 17:56 GMT

ಬೆಂಗಳೂರು, ನ.22: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ನಿರ್ಧಾರವು ಮುಖ್ಯಮಂತ್ರಿ ಹಾಗೂ ಹೈಕಮಾಂಡ್‍ಗೆ ಬಿಟ್ಟಿದ್ದು, ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ರವಿವಾರ ಮುಖ್ಯಮಂತ್ರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಯನ್ನು ಭೇಟಿಯಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ. ಸಂಪುಟ ಪುನರಚನೆ ಅಥವಾ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ, ಯಾವ ಸಂದರ್ಭದಲ್ಲಿ ಏನು ನಿರ್ಧಾರ ಮಾಡಬೇಕೆಂಬುದನ್ನು ಹೈಕಮಾಂಡ್ ತಿರ್ಮಾನಿಸುತ್ತದೆ ಎಂದರು.

ನಾನು ದೇಹಲಿಗೆ ಭೇಟಿ ನೀಡಿದ ವೇಳೆ ಪಕ್ಷದ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷರನ್ನು ಭೇಟಿ ಮಾಡಿ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಲು ಕೇಳಿರುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು

ಹಾದಿ ಬೀದಿಯಲ್ಲಿ ಮಾತನಾಡಿದರೆ ಸ್ಥಾನಮಾನ ಸಿಗುವುದಿಲ್ಲ, ಸುಖಾಸುಮ್ಮನೆ ಬಡಿದುಕೊಂಡರೆ ಏನೂ ಸಿಗುವುದಿಲ್ಲ. ಹೀಗಾಗಿ ನಾನು ಪಕ್ಷದ ವರಿಷ್ಟರ ಮುಂದೆ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಿದ್ದೇನೆಂದು ಅವರು ಹೇಳಿದರು.

ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬುದು ನಮಗೆ ಗೊತ್ತಿಲ್ಲ.  ಪರಸ್ಥಿತಿಗೆ ಅನುಗುಣವಾಗಿ ವರಿಷ್ಟರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಬಾರಿ ಅವಕಾಶ ಸಿಗುವ ವಿಶ್ವಾಸವಿದೆ.

-ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News