ಸದಾಶಿವ ವರದಿ ಜಾರಿ ಮಾಡದಿದ್ದರೆ ಬಿಜೆಪಿ ತೊರೆಯುತ್ತೇನೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕರಪ್ಪ

Update: 2020-11-22 17:58 GMT

ಚಿಕ್ಕಮಗಳೂರು, ನ.22: ರಾಜ್ಯ ಸರಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸದಿದ್ದರೆ ಬಿಜೆಪಿ ತೊರೆದು ಸಮಾಜಸೇವೆಗೆ ಮುಂದಾಗುತ್ತೇನೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶಂಕರಪ್ಪ ತಿಳಿಸಿದರು.

ಅಂಬೇಡ್ಕರ್ ಭವನದಲ್ಲಿ ರವಿವಾರ ಮಾದಿಗ ದಂಡೋರ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಸಮುದಾಯದಿಂದ ಸಹಾಯವಾಗಲಿದೆ ಎಂದರು.

ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ವಿಫಲವಾದರೆ ಬಿಜೆಪಿಯನ್ನು ತೊರೆದು ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕೆಲವರು ನಾನು ಬಿಜೆಪಿಗೆ ಮತಾಂತರವಾಗಿದ್ದೇನೆಂದು ಟೀಕಿಸುತ್ತಾರೆ. ಮೊದಲು ನಾನು ಭಾರತೀಯ, ಬಳಿಕ ಹಿಂದು, ಆಮೇಲೆ ಮಾದಿಗ. ಹಿಂದುತ್ವ ಉಳಿದಾಗ ಮಾತ್ರ ಮಾದಿಗ ಸಮುದಾಯ ಉಳಿಯುತ್ತದೆ ಎಂದು ಹೇಳಿದರು.

ಮೀನುಗಾರಿಕೆ ವಿಶ್ವವಿದ್ಯಾಲಯದ ನಿರ್ದೇಶಕ ದೀಪಕ್‍ ದೊಡ್ಡಯ್ಯ ಮಾತನಾಡಿ, ನಾವುಗಳು ಈ ದೇಶದ ನಿವಾಸಿಗಳು, ಒಗ್ಗಟ್ಟಿನ ಕೊರತೆಯಿಂದ ಬಹಳಷ್ಟು ಅವಕಾಶಗಳು ಕೈತಪ್ಪುತ್ತಿವೆ. ಈ ಹಿಂದೆ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘಗಳು ಪ್ರತಿಭಟನೆಗೆ ಇಳಿದರೆ ಸರಕಾರ ಮಾತು ಕೇಳುವ ಪರಿಸ್ಥಿತಿ ಇತ್ತು. ಈಗ ಸಂಘಟನೆಗಳು ಒಡೆದು ಹೋಗಿರುವುದರಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎಂದರು.

ಬಾಬು ಜಗಜೀವರಾಂ ಅವರಿಗೆ ಈ ದೇಶದ ಪ್ರಧಾನಿಯಾಗುವ ಅವಕಾಶವಿದ್ದರೂ ಕೈತಪ್ಪಿಹೋಗಿದೆ. ಬಿಜೆಪಿ ಸಮಾಜವನ್ನು ಗುರುತಿಸಿ ಗೋವಿಂದಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ ಎಂದು ತಿಳಿಸಿದರು.

ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಯು.ಆರ್.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಮಹಾದೇವಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರಡಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News