ನಾಲ್ಕೈದು ತಿಂಗಳಿಂದ ವಿಕಲಚೇತನರಿಗೆ ಸಿಗದ ಮಾಸಾಶನ: ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ಸರಕಾರಿ ಸೌಲಭ್ಯ ?

Update: 2020-11-22 18:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.22: ರಾಜ್ಯದಲ್ಲಿರುವ 20 ಲಕ್ಷಕ್ಕೂ ಅಧಿಕ ವಿಕಲಚೇತನರ ಪೈಕಿ ಶೇ.40ರಷ್ಟು ವಿಕಲಚೇತನರು ನಾಲ್ಕೈದು ತಿಂಗಳುಗಳಿಂದ ಮಾಸಾಶನದಿಂದ ವಂಚಿತರಾಗಿದ್ದಾರೆ. ವಿಕಲಚೇತನರು ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಲಂಚ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಅಂಗವಿಕಲ ಹಕ್ಕುಗಳ ಅಧಿನಿಯಮ-2016ರ ಪ್ರಕಾರ 21 ವಿಧದ ವಿಕಲಚೇತನರು ಸರಕಾರದಿಂದ ಮಾಸಾಶನ ಪಡೆಯುವ ಹಕ್ಕು ಹೊಂದಿದ್ದಾರೆ. ಭಾಗಶಃ ವಿಕಲಚೇತನರಿಗೆ 600 ರೂ., ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ 1,400 ರೂ. ಮಾಸಿಕ ವೇತನ ಸಿಗುತ್ತದೆ. ಆದರೆ, ಅವರಿಗೆ ಲಾಕ್‍ಡೌನ್ ಅವಧಿಯಲ್ಲಂತೂ ಕೆಲಸವೂ ಇಲ್ಲದೆ, ಮಾಸಾಶನವೂ ಸರಿಯಾದ ಸಮಯಕ್ಕೆ ಬಾರದೆ ಪರದಾಡಿದ್ದಾರೆ.

ವಿಕಲಚೇತನರಿಗೆ ಸೌಲಭ್ಯ ಒದಗಿಸಬೇಕಾದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಳ್ಳುವ ಬದಲು ಬೇರೊಬ್ಬರತ್ತ ಬೊಟ್ಟು ತೋರಿಸುತ್ತಿರುವ ಕಾರಣಕ್ಕೆ ಮಾಸಾಶನ ಸಿಗದ ಫಲಾನುಭವಿಗಳು ಅಂಚೆ ಕಚೇರಿ, ಖಜಾನೆ ಕಚೇರಿ, ತಾಲೂಕು ಕಚೇರಿಗಳನ್ನು ತಿರುಗಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಾದ ಅನೇಕಲ್‍ನಲ್ಲಿ 108, ಪೂರ್ವ ತಾಲೂಕಿನಲ್ಲಿ 208, ಉತ್ತರ ತಾಲೂಕಿನಲ್ಲಿ 683, ಉತ್ತರದಲ್ಲಿ (ಹೆಚ್ಚುವರಿ) 245 ಪೂರ್ವ ತಾಲೂಕಿನಲ್ಲಿ 355 ಫಲಾನುಭವಿಗಳ ಪೆನ್ಶನ್ ಬಾಕಿ ಇವೆ. ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಾದ ದೇವನಹಳ್ಳಿಯಲ್ಲಿ 72, ದೊಡ್ಡಬಳ್ಳಾಪುರದಲ್ಲಿ 207, ಹೊಸ ಕೋಟೆಯಲ್ಲಿ 48, ನೆಲಮಂಗಲದಲ್ಲಿ 47 ಫಲಾನುಭವಿಗಳಿಗೆ ಮಾಸಿಕ ವೇತನ ಬರಬೇಕಿದೆ. ಇನ್ನು ರಾಯಚೂರು ಜಿಲ್ಲೆಯಲ್ಲಿ ಈವರೆಗೂ 45 ಸಾವಿರ ವಿಕಲಚೇತನರಿಗೆ ಪ್ರಮಾಣ ಪತ್ರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಆದರೆ ಕೊರೋನದಿಂದ ಆಗಸ್ಟ್ ತಿಂಗಳವರೆಗೆ ಅದನ್ನು ಸ್ಥಗಿತಗೊಳಿಸಲಾಗಿತ್ತು.

ಇಲಾಖೆಗಳಲ್ಲಿ ಹಣಕಾಸಿನ ಅವ್ಯವಹಾರವೂ ನಡೆಯುತ್ತಿದೆ. ಪೆನ್ಶನ್ ಜಾರಿಗೊಳಿಸಲೂ ಹಣ ಕೊಡಬೇಕು, ಅಂಗವೈಕಲ್ಯದ ಪ್ರಮಾಣವನ್ನು ಹೆಚ್ಚು ಮಾಡಲು ಹಣ ಕೊಡಬೇಕು, ಇನ್ನು ಕಚೇರಿ ಕಚೇರಿ ಅಲೆದಾಡಬೇಕು. ಸರಕಾರ ಇದನ್ನು ಗಮನಿಸಿ, ಅಂಗವಿಕಲರ ಅಭಿವೃದ್ಧಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಮಾಸಾಶನ ಜಮಾವಣೆ ಮಾಡಬೇಕು ಎಂಬುದು ನೋಂದವರ ಮಾತು.

ಅಧಿಕಾರಿಗಳಿಂದ ವಿಕಲಚೇತನರ ಸೌಲಭ್ಯ ನೀಡಲು ಲಂಚಕ್ಕೆ ಬೇಡಿಕೆ ಬಂದಿರುವ ಕಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಕಂಡು ಬಂದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಈಗ ಜಿಲ್ಲಾಮಟ್ಟದಲ್ಲಿ ವಿಶೇಷಚೇತನರಿಗೆ ಸಹಾಯವಾಣಿ ಇದ್ದು, ಮುಂದಿನ ದಿನಗಳಗಲ್ಲಿ ರಾಜ್ಯಮಟ್ಟದಲ್ಲಿ ಹೆಲ್ಪ್‍ಲೈನ್ ಮಾಡಲಾಗುವುದು.

-ಬಸವರಾಜ್, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News