ಸಿಎಂ ಯಡಿಯೂರಪ್ಪರಿಗೆ ದತ್ತಾತ್ರೇಯನ ಶಾಪವಿದೆ: ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ

Update: 2020-11-22 18:11 GMT

ಚಿಕ್ಕಮಗಳೂರು, ನ.22: ಕೇಂದ್ರ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದು, ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಒತ್ತಾಯಿಸಿದರು.

ರವಿವಾರ ನಗರದಲ್ಲಿ ದತ್ತಮಾಲಾಧಾರಣೆ ಮಾಡಿ ನಂತರ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದತ್ತಾತ್ರೇಯ ಸ್ವಾಮಿಯ ಶಾಪವಿದೆ. ಹಿಂದೊಮ್ಮೆ ದತ್ತಮಾಲೆ ಧರಿಸಿದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ದತ್ತಪೀಠಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿಯಾದ ನಂತರ ದತ್ತಪೀಠಕ್ಕೆ ಬಂದಿಲ್ಲ, ದತ್ತಮಾಲಾ ಅಭಿಯಾನದ ಕೊನೆ ದಿನ ದತ್ತಪೀಠಕ್ಕೆ ಬಂದು ಅವರ ಶಾಪ ವಿಮುಕ್ತಗೊಳಿಸಿಕೊಳ್ಳಬೇಕು ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಪೂರ್ಣಾವಧಿ ಅಧಿಕಾರ ನಡೆಸಿಲ್ಲ, ದತ್ತಾತ್ರೇಯಸ್ವಾಮಿಯ ಶಾಪದಿಂದ ಹೀಗಾಗಿದೆ. ಶಾಪ ವಿಮೋಚನೆ ಆಗಬೇಕೆಂದರೆ ದತ್ತಪೀಠಕ್ಕೆ ಬರಬೇಕು. ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬಂದು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಆಗ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸೋಕೆ ಗುರುಗಳ ಆರ್ಶೀವಾದ ಸಿಗಲಿದೆ ಎಂದರು.

ದತ್ತಪೀಠ ಹಿಂದೂಗಳಿಗೆ ಒಪ್ಪಿಸಲು ಒಳ್ಳೇಯ ಅವಕಾಶ, ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಬಜೆಟ್ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು, ಎಲ್ಲಾ ನ್ಯಾಯಾಲಯಗಳಲ್ಲಿ ದತ್ತಪೀಠ ಹಿಂದೂಗಳಿಗೆ ಸೇರಬೇಕೆಂದು ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ರಾಜ್ಯ ಸರಕಾರ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ದತ್ತಪೀಠ ಹಿಂದೂಗಳಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ರಂಜಿತ್‍ ಶೆಟ್ಟಿ ಮಾತನಾಡಿ, 15ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಕೋವಿಡ್-19 ಸೋಂಕು ಇರುವುದ ರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ದತ್ತಪೀಠಕ್ಕೆ ದತ್ತಮಾಲಾಧಾರಿಗಳು ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ಬರಲಿದ್ದಾರೆ. ದತ್ತಮಾಲಾ ಅಂಗವಾಗಿ ದತ್ತಮಾಲಾಧಾರಣ ಕಾರ್ಯಕ್ರಮ, ಪ್ರತಿಯೊಂದು ದೇವಸ್ಥಾನಗಳಲ್ಲಿ ದತ್ತ ದೀಪೋತ್ಸವ, ದತ್ತಪೀಠ ಹಿಂದೂಗಳಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News