ಮಹಾತ್ಮ ಗಾಂಧೀಜಿ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಕೊರೋನಗೆ ಬಲಿ

Update: 2020-11-23 17:14 GMT

 ಜೋಹಾನ್ಸ್‌ಬರ್ಗ್,ನ.23: ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಸತೀಶ್ ಧುಪೆಲಿಯಾ ಅವರು ಕೋವಿಡ್-19 ಸೋಂಕಿನಿಂದಾಗಿ ರವಿವಾರ ನಿಧನರಾಗಿದ್ದಾರೆ. ಸತೀಶ್ ಧುಪೇಲಿಯಾ ಅವರು ಮೂರು ದಿನಗಳ ಹಿಂದೆಯಷ್ಟೇ ತನ್ನ 66ನೇ ಜನ್ಮದಿನವನ್ನು ಆಚರಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

  ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಧುಪೇಲಿಯಾ ಅವರು ಜೋಹಾನ್ಸ್‌ಬರ್ಗ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರಿಗೆ ಕೋವಿಡ್-19 ಸೋಂಕು ತಗಲಿತ್ತು. ರವಿವಾರ ಸಂಜೆ ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದರು’’ ಎಂದು ಅವರ ಸೋದರಿ ಉಮಾ ಧುಪೇಲಿಯಾ ಮೆಸ್ತ್ರಿ ತಿಳಿಸಿದ್ದಾರೆ.

ಧುಪೇಲಿಯಾ ಅವರು ಉಮಾ ಅಲ್ಲದೆ ಇನ್ನೋರ್ವ ಸೋದರಿ ಕೀರ್ತಿ ಮೆನನ್ ಅವರನ್ನು ಅಗಲಿದ್ದಾರೆ. ಸತೀಶ್ ಧುಪೇಲಿಯಾ ಹಾಗೂ ಅವರ ಇಬ್ಬರು ಸೋದರಿಯರು, ಮಹಾತ್ಮಾಗಾಂಧೀಜಿಯರ ಪುತ್ರ ಮಣಿಲಾಲ್ ಗಾಂಧಿಯ ವಂಶಜರಾಗಿದ್ದಾರೆ.

 ಧುಪೇಲಿಯಾ ಅವರು ಮಾಧ್ಯಮಗಳಲ್ಲಿ ವೀಡಿಯೊಗ್ರಾಫರ್ ಹಾಗೂ ಫೋಟೋಗ್ರಾಫರ್ ಆಗಿ ವೃತ್ತಿಬದುಕನ್ನು ಸಾಗಿಸಿದ್ದಾರೆ. ಮಹಾತ್ಮಾಗಾಂಧೀಜಿಯವರು ದರ್ಬಾನ್‌ನಲ್ಲಿದ್ದಾಗ ಅವರು ಫಿನಿಕ್ಸ್ ವಸತಿಶಿಬಿರದಲ್ಲಿ ಆರಂಭಿಸಿದ್ದ ಸೇವಾ ಕಾರ್ಯಗಳನ್ನು ಧುಪೇಲಿಯಾ ಅವರು ಗಾಂಧಿ ಅಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಮುಂದುವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News