ಸಚಿವ ಸಂಪುಟ ವಿಸ್ತರಣೆ ಕಗ್ಗಂಟು: ಸಿಎಂ ಬಿಎಸ್‌ವೈ ಭೇಟಿ ಮಾಡಿದ ಬಿ.ಎಲ್.ಸಂತೋಷ್

Update: 2020-11-23 14:31 GMT

ಬೆಂಗಳೂರು, ನ.23: ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬೇಕೆ ಅಥವಾ ಪುನರ್‍ರಚನೆ ಮಾಡಬೇಕೆ ಎಂಬುದರ ಬಗ್ಗೆ ವರಿಷ್ಠರ ಸೂಚನೆಗೆ ಕಾಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಇತ್ತೀಚೆಗಷ್ಟೇ ಹೊಸದಿಲ್ಲಿಗೆ ತೆರಳಿದ್ದ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ಅಲ್ಲದೆ, ಹಾಲಿ ಕೆಲವು ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಕುರಿತು ಮಾತುಕತೆ ನಡೆಸಿ, ತಾವು ಸಿದ್ಧಪಡಿಸಿದ್ದ ಸಚಿವರ ಪಟ್ಟಿಯನ್ನು ಕೊಟ್ಟು ಬಂದಿದ್ದರು.

ಸಚಿವ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನರ್ ರಚನೆ ಮಾಡಬೇಕೋ ಎಂಬುದರ ಬಗ್ಗೆ ಪಕ್ಷದ ಇತರ ಪ್ರಮುಖರೊಂದಿಗೆ ಚರ್ಚಿಸಿ ಮೂರು, ನಾಲ್ಕು ದಿನಗಳಲ್ಲಿ ತಮಗೆ ಸಂದೇಶ ರವಾನಿಸುವುದಾಗಿ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಯಡಿಯೂರಪ್ಪಗೆ ತಿಳಿಸಿದ್ದರು. ಆದರೆ, ಈವರೆಗೆ ಬಿಜೆಪಿ ಹೈಕಮಾಂಡ್‍ನಿಂದ ಯಾವುದೆ ಸೂಚನೆ ಬಾರದೆ ಇರುವುದು ಸಚಿವ ಸ್ಥಾನ ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಮುಖ್ಯಮಂತ್ರಿ ಭೇಟಿ ವೇಳೆಯಲ್ಲೆ, ಹೊಸದಿಲ್ಲಿಯಲ್ಲಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿರುವ ಎಂಟಿಬಿ ನಾಗರಾಜ್, ಮುನಿರತ್ನ, ಎಚ್.ವಿಶ್ವನಾಥ್, ಆರ್.ಶಂಕರ್, ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿರುವುದಾಗಿ ತಿಳಿದು ಬಂದಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ ಹಾಗೂ ವಿವಿಧ ಮುಖಂಡರ ನಿವಾಸಗಳಲ್ಲಿ ನಡೆಯುತ್ತಿರುವ ಶಾಸಕರ ಸಭೆಗಳ ಹಿನ್ನೆಲೆಯಲ್ಲಿ, ಬಿ.ಎಲ್.ಸಂತೋಷ್, ಮುಖ್ಯಮಂತ್ರಿಯನ್ನು ಭೇಟಿ ಮಾಡಿ 15 ನಿಮಿಷಗಳ ಕಾಲ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News