ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ಹೊರಹೊಮ್ಮಿದ ಕೊಡಗಿನ ವರುಣ್ ಗಣಪತಿ

Update: 2020-11-23 16:37 GMT

ಮಡಿಕೇರಿ ನ.23 : ಭಾರತೀಯ ಭೂ ಸೇನೆಯಲ್ಲಿ ಒಂದು ವರ್ಷದ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ “ಸೋರ್ಡ್ ಆಫ್ ಹಾನರ್” ಮತ್ತು 'ರಾಷ್ಟ್ರಪತಿಗಳ ಚಿನ್ನದ ಪದಕ'ದೊಂದಿಗೆ ಲೆಫ್ಟಿನೆಂಟ್ ಆಗಿ ಕೊಡಗಿನ ಕುವರ ಚೋಳಂಡ ವರುಣ್ ಗಣಪತಿ ಹೊರಹೊಮ್ಮಿದ್ದಾರೆ.

ಇತ್ತೀಚೆಗೆ ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯ ಆವರಣದಲ್ಲಿ ನಡೆದ 'ಪಾಸಿಂಗ್ ಔಟ್ ಪೇರೇಡ್'ನಲ್ಲಿ ಈ ಗೌರವಕ್ಕೆ ಭಾಜನರಾದ ವರುಣ್ ಅವರು, ಈ ಮೊದಲು ಬೆಂಗಳೂರಿನ ಬಿಶಪ್ ಕಾಟನ್ ಬಾಯ್ಸ್ ಸ್ಕೂಲ್ ಹಾಗು ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ತಮ್ಮ ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಹೊರಹೊಮ್ಮಿದ ಬಳಿಕ ಭಾರತೀಯ ರಕ್ಷಣಾ ಪಡೆಗಳಿಗೆ ಸೇರಬೇಕು ಎಂಬ ಗುರಿಯನ್ನು ಹೊಂದಿದ್ದರು. 

ಇದೀಗ ಅವರ ಯಶಸ್ಸಿಗೆ ಕಲಶವಿಟ್ಟಂತೆ, ಇತ್ತಿಚೇಗೆ ಚೆನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯ ಪರಮವೀರ ಚಕ್ರ ಪುರಸ್ಕೃತ ಹುತಾತ್ಮ ಲೆಪ್ಟಿನೆಂಟ್ ಕರ್ನಲ್ ಆರ್. ಪರಮೇಶ್ವರನ್ ಮೈದಾನದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‍ನಲ್ಲಿ 'ಬೆಸ್ಟ್ ಆಲ್ ರೌಂಡ್ ಕೆಡೆಟ್' ಮತ್ತು 'ಫಸ್ಟ್ ಇನ್‍ಆರ್ಡರ್ ಆಫ್ ಮೆರಿಟ್' ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಮುಖ್ಯ ಅತಿಥಿಗಳಾಗಿದ್ದ ಭಾರತೀಯ ಭೂಸೇನೆಯ ಪಶ್ಚಿಮ ವಲಯದ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಆರ್‍ಪಿ ಸಿಂಗ್ ಪಿವಿಎಸ್‍ಎಂ,ಎವಿಎಸ್‍ಎಂ, ವಿಎಸ್‍ಎಂ ಅವರಿಂದ ವರುಣ್ ಗಣಪತಿ ಅವರು ಸ್ವೀಕರಿದ್ದಾರೆ.

ಇದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದ ಅವರು ಈ ಕುರಿತಾದ ಪರೀಕ್ಷೆಗಳಿಗೆ  ಹಾಜರಾಗಿ ಎಲ್ಲದರಲ್ಲಿಯೂ ಉತ್ತೀರ್ಣರಾಗಿದ್ದರು. ಚೆನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿ ಒಂದು ವರ್ಷದ ತರಬೇತಿಯನ್ನು ಪೂರೈಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಈ ವರ್ಷದ ಜನವರಿಯಲ್ಲಿ ವಾಯುಪಡೆಯ ತರಬೇತಿ ಪರೀಕ್ಷೆಗಳಲ್ಲಿ  ಕೂಡ ಉತ್ತೀರ್ಣರಾಗಿ ವಾಯುಪಡೆಗೆ ಆಯ್ಕೆಯಾಗಿದ್ದರು.

ವರುಣ್ ಗಣಪತಿಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್ಪಿ ಆಗಿರುವ ಚೋಳಂಡ ಪೂವಯ್ಯ ಹಾಗು ಧರಣಿ ಪೂವಯ್ಯ (ತಾಮನೆ ಮಣವಟ್ಟೀರ) ದಂಪತಿಗಳ ಹಿರಿಯ ಪುತ್ರರಾಗಿದ್ದಾರೆ. ದ್ವಿತೀಯ ಪುತ್ರ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪೂವಯ್ಯ ಅವರು ವಿರಾಜಪೇಟೆಯ ಕಲ್ಲುಮೊಟ್ಟೆ ನಿವಾಸಿಯಾಗಿದ್ದಾರೆ. ಪೂವಯ್ಯ ಅವರು ಈ ಹಿಂದೆ ಕುಶಾಲನಗರ ವಿಭಾಗದ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪೂವಯ್ಯ ಅವರು ತಮ್ಮ ಪೊಲೀಸ್ ಇಲಾಖೆಯಲ್ಲಿನ ಸೇವೆಗಾಗಿ ಎರಡು ಬಾರಿ ಮುಖ್ಯಮಂತ್ರಿಗಳ ಹಾಗೂ ರಾಜ್ಯಪಾಲರ ಪ್ರಶಂಸನಾ ಪತ್ರ ಮತ್ತು ರಾಷ್ಟ್ರಪತಿಗಳ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ವರುಣ್ ಅವರು ಈ ಹಿಂದೆ 'ಖಡ್ಗ ಗೌರವಕ್ಕೆ' ಪಾತ್ರರಾದ ಕರ್ನಲ್ ಪಟ್ಟಡ ಎನ್. ತಿಮ್ಮಯ್ಯ, ಲೆಪ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ.ತಿಮ್ಮಯ್ಯ, ಸ್ಕ್ವಾ.ಲೀ. ಮಲ್ಲೇಂಗಡ ಬಿ.ಚಿಟ್ಟಿಯಪ್ಪ ಮತ್ತು ಲೆ.ಕಮಾಂಡರ್ ಮುಕ್ಕಾಟೀರ ಸೂರಜ್ ಅಯ್ಯಪ್ಪ ಅವರ ವಿಶೇಷ ಸಾಧನೆಯ ಪಟ್ಟಿಯಲ್ಲಿ ಸೇರಿದ್ದಾರೆ.

ವರುಣ್ ಗಣಪತಿಯವರು ಲೆ.ಕಮಾಂಡರ್ ಮುಕ್ಕಾಟೀರ ಸೂರಜ್ ಅಯ್ಯಪ್ಪ ಅವರಂತೆ 'ಖಡ್ಗ ಗೌರವ' ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದ ಸಾಧನೆಯಲ್ಲಿ ಎರಡನೇಯವರಾಗಿ ಹೊರಹೊಮ್ಮಿದ್ದು ಮತ್ತೊಂದು ವಿಶೇಷವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News