ನ.26ರ ಅಖಿಲ ಭಾರತ ಮುಷ್ಕರಕ್ಕೆ ಎಡ ವಿದ್ಯಾರ್ಥಿ ಸಂಘಟನೆಗಳ ಬೆಂಬಲ

Update: 2020-11-23 17:13 GMT

ಬೆಂಗಳೂರು, ನ.23: ಅಸಂವಿಧಾನಿಕವಾಗಿ ಜಾರಿಗೆ ಮುಂದಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ಖಂಡಿಸಿ ನ.26 ರಂದು ಕಾರ್ಮಿಕರ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಡ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ಸೂಚಿಸಿವೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಸಮಿತಿಯ ಮುಖಂಡರಾದ ಕೆ.ಜ್ಯೋತಿ, ಕೇಂದ್ರ ಸರಕಾರವು ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಅದರೆ ಸಾಧಕ-ಬಾಧಕಗಳನ್ನು ಅರಿಯದೇ ಏಕಾಏಕಿ ಜಾರಿ ಮಾಡುವ ಮೂಲಕ ಅಪ್ರಸತ್ತಾತ್ಮಕವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಹೊಸ ಶಿಕ್ಷಣ ನೀತಿಯು ಮೇಲ್ನೋಟಕ್ಕೆ ಚೆನ್ನಾಗಿದ್ದರೂ, ಅದರ ಆಂತರ್ಯದೊಳಗೆ ಶಿಕ್ಷಣವನ್ನು ಖಾಸಗೀಕರಣ ಮಾಡುವಂತಹ ಹುನ್ನಾರ ಅಡಗಿದೆ. ಇತಿಹಾಸ ತಿರುಚುವಿಕೆಯಂತಹ ಅಂಶಗಳನ್ನು ಸೇರಿಸಲಾಗಿದೆ. ಜನರಿಂದ ಸಮಗ್ರವಾಗಿ ಅಭಿಪ್ರಾಯ ಪಡೆಯದೇ ರಾಜ್ಯ ಸರಕಾರವೂ ದೊಡ್ಡ ಮಟ್ಟದಲ್ಲಿ ಎನ್‍ಇಪಿಯನ್ನು ಜಾರಿ ಮಾಡಲು ತರಾತುರಿಯಲ್ಲಿದೆ ಎಂದು ದೂರಿದರು.

ರಾಜ್ಯ ಸರಕಾರಗಳಿಗೆ ಶಿಕ್ಷಣ ಕ್ಷೇತ್ರ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸಿ ಶಿಕ್ಷಣವನ್ನು ನೀತಿ ನಿರೂಪಣೆಯ ಅಧಿಕಾರಿಗಳನ್ನು ಕೇಂದ್ರೀಕರಣಗೊಳಿಸುವ ಅಂಶಗಳನ್ನು ರಾಜ್ಯ ಸರಕಾರ ವಿರೋಧಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕಿರುವ ಅಧಿಕಾರ, ಹಕ್ಕುಗಳನ್ನು ಕಾಯ್ದಿರಿಸಲು ಕೇಂದ್ರವನ್ನು ಆಗ್ರಹಿಸಿ ಒಕ್ಕೂಟ ವ್ಯವಸ್ಥೆಯ ಆಶಯಗಳ ಉಳಿಸಲು ಮುಂದಾಗಬೇಕು. ಸರಕಾರವೇ ಎಲ್ಲ ಭಾಷೆಗಳಿಗೆ ಎನ್‍ಇಪಿಯನ್ನು ಅನುವಾದಿಸಬೇಕು ಹಾಗೂ ಅದನ್ನು ಎಲ್ಲ ರಾಜ್ಯ ವಿಧಾನಸಭೆ, ವಿಧಾನಪರಿಷತ್‍ಗಳಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಎಸ್‍ಎಫ್‍ಐ ಕಾರ್ಯದರ್ಶಿ ವಾಸುದೇವರೆಡ್ಡಿ ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್, ಕೆವಿಎಸ್ ಸಂಚಾಲಕ ಸರೋವರ ಬೆಂಕಿಕೆರೆ, ಎಐಡಿಎಸ್‍ಓನ ಅಶ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News