ಭಾರತದ ಕೋಮುವಾದ ಕೊರೋನಕ್ಕಿಂತ ಅಪಾಯಕಾರಿ ವೈರಸ್: ಎಸ್.ಜಿ.ಸಿದ್ದರಾಮಯ್ಯ

Update: 2020-11-24 14:20 GMT

ಬೆಂಗಳೂರು, ನ.24: ಭಾರತದಲ್ಲಿ ಕೋಮುವಾದ ಎನ್ನುವುದು ಕೊರೋನಗಿಂತಲೂ ಅಪಾಯಕಾರಿಯಾದ ವೈರಸ್ ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಜಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಅವಧಿ ಹಮ್ಮಿಕೊಂಡಿದ್ದ ಎಸ್.ಜಿ.ಸಿದ್ಧರಾಮಯ್ಯರವರ ಬಿಜ್ಜಳ ನ್ಯಾಯ ಹಾಗೂ ದಕ್ಕದ ದಾರಿಯಲ್ಲಿ ಕವನ ಸಂಕಲನಗಳ ಆನ್‍ಲೈನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಶತಮಾನಗಳಿಂದ ಅಂಟಿಕೊಂಡು ಬಂದಿರುವ ಕೋಮುವಾದವೇ ಎಲ್ಲ ರೋಗಕ್ಕಿಂತ ಅತ್ಯಂತ ವಿಷಕಾರಿಯಾದ ರೋಗವಾಗಿದೆ ಎಂದು ಅಭಿಪ್ರಾಯಿಸಿದರು.

ಯಾವ ಸಮುದಾಯ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೋ, ಆ ಸಮುದಾಯದ ವ್ಯಕ್ತಿಗಳೇ ಈ ಕೋಮುವಾದದ ಮುನ್ನಡೆಗೆ ಕಾಲಾಳುಗಳಾಗಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ಇವತ್ತು ಭಾರತಕ್ಕೆ ಕೋಮುವಾದವನ್ನು ಮೆಟ್ಟಿ ನಿಲ್ಲುವುದು ಮುಖ್ಯವಾದ ಸವಾಲಾಗಿದೆ. ಇದರಿಂದ ಮುಕ್ತವಾಗದ ಹೊರತು ಭಾರತಕ್ಕೆ ಭವಿಷ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.

ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಿ, ಹಿರಿಯ ಸಾಹಿತಿ ಎಸ್.ಜಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಹಾಗೂ ಕಾವ್ಯ ಎರಡೂ ನಿಷ್ಠುರ ಗುಣವನ್ನು ಹೊಂದಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸಿಕೊಳ್ಳಬೇಕಾಗಿರುವ ಈ ಕಾಲದಲ್ಲಿ ಸಿದ್ದರಾಮಯ್ಯನವರ ಕಾವ್ಯದ ತಾಯ್ತನ ಕಾಡುತ್ತದೆ ಎಂದರು.

ವಿಮರ್ಶಕ ರಾಮಲಿಂಗಪ್ಪ ಟಿ.ಬೇಗೂರು ಮಾತನಾಡಿ, ಹಿರಿಯ ಕವಿ, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಜನಪರ, ಜೀವಪರ ದೃಷ್ಟಿಕೋನ ಅವರ ಬರವಣಿಗೆಯ ಮುಖ್ಯ ಕೇಂದ್ರವಾಗಿದೆ. ಓದುಗನೂ ಕವಿತೆಯನ್ನು ಅನುಭವಿಸುವಂತೆ ಸಿದ್ದರಾಮಯ್ಯ ಬರೆಯುತ್ತಾರೆ. ಅವರಿಗೆ ಅಪರಿಮಿತದ ಹಂಬಲ ಮತ್ತು ಓದುಗನಿಗೆ ಅರ್ಥದ ತೊಡಕಾಗಬಾರದು ಎನ್ನುವ ಕಾಳಜಿಯಿದೆ ಎಂದರು.

ಅವಧಿಯ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ಮಾತನಾಡಿ, ಬಿಜ್ಜಳ ನ್ಯಾಯದ ಮೂಲಕ ಸಿದ್ದರಾಮಯ್ಯನವರು ಸುಳ್ಳುಗಳ ಕೋಟೆಯಿಂದ ಆತನನ್ನು ಬಿಡಿಸಿಕೊಂಡು ಹೊರತಂದಿದ್ದಾರೆ. ಬಿಜ್ಜಳ ಜನಪರವಾಗಿದ್ದ ಎನ್ನುವುದನ್ನು ಮರೆಸುವ ಕುತಂತ್ರವನ್ನು ಸಿದ್ದರಾಮಯ್ಯನವರ ಕಾವ್ಯ ಬಯಲು ಮಾಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News