ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಮೂರು ಸಮಿತಿ ರಚನೆ: ಬಸವರಾಜ ಬೊಮ್ಮಾಯಿ

Update: 2020-11-24 13:17 GMT

ಬೆಂಗಳೂರು, ನ.24: ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಲಸಿಕೆ ವಿತರಣೆ ಮಾಡಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಮೂರು ಉನ್ನತಮಟ್ಟದ ಸಮಿತಿಗಳನ್ನು ರಚನೆ ಮಾಡಲು ನಿರ್ಧರಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕೆ ವಿತರಣೆ ಬಗ್ಗೆ ರಾಜ್ಯ ಸರಕಾರಗಳು ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ನಡೆಸಿದ ವಿಡಿಯೋ ಸಂವಾದದ ಬಳಿಕ ವಿಧಾನಸೌಧದಲ್ಲಿ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಸಂಚಾಲನ ಸಮಿತಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ರಚಿಸುವ ಬೂತ್‍ಗಳ ಮಾದರಿಯಲ್ಲಿ ಲಸಿಕಾ ವಿತರಣಾ ಕೇಂದ್ರಗಳನ್ನು ರಚನೆ ಮಾಡಲಾಗುವುದು ಎಂದು ಅವರು ಹೇಳಿದರು.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಕೋವಿಡ್ ಲಸಿಕೆ ಬಗ್ಗೆ ವಿಡಿಯೋ ಸಂವಾದದ ವೇಳೆ ಮಾಹಿತಿ ನೀಡಿದ್ದಾರೆ. ವಿಶ್ವದೆಲ್ಲೆಡೆ ವಿವಿಧ ದೇಶಗಳಲ್ಲಿ ಲಸಿಕೆಗಳನ್ನು ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ. 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಯ ಹಂತದಲ್ಲಿವೆ, 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್‍ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್‍ನಲ್ಲಿವೆ. ನಮ್ಮ ದೇಶದಲ್ಲಿ 24 ಸಂಸ್ಥೆಗಳು ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರಂಭಿಕ ಹಂತದಲ್ಲಿ ದೇಶದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೋನ ವಾರಿಯರ್ಸ್‍ಗಳು ಹಾಗೂ 26 ಕೋಟಿ ಮಂದಿ 50 ರಿಂದ 60 ವರ್ಷ ವಯೋಮಾನದವರಿಗೆ ಲಸಿಕೆ ಕೊಡಲು ಉದ್ದೇಶಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಿ ನಡೆಸಿದ ವಿಡಿಯೋ ಸಂವಾದದಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಪಾಲ್ಗೊಂಡಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೈದರಾಬಾದ್‍ನಲ್ಲಿದ್ದು, ಅಲ್ಲಿಂದಲೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News