ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನನ್ನು ತಳ್ಳಿದ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ: ವಿಡಿಯೋ ವೈರಲ್

Update: 2020-11-24 14:16 GMT

ಹಾವೇರಿ, ನ.24: ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕಳೆದ ಶುಕ್ರವಾರದಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖರಪ್ಪ ಎಂಬವರು ತಮ್ಮ ಓಣಿಯ ಸಮಸ್ಯೆ ಹೇಳಲು ಮುಂದಾದರು. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಬಳಿ ಸಮಸ್ಯೆ ಹೇಳುತ್ತಿದ್ದಾಗ ಶಿವಕುಮಾರ್ ಉದಾಸಿ ಮಧ್ಯ ಪ್ರವೇಶಿಸಿದ್ದು, ಈ ವೇಳೆ ಶೇಖರಪ್ಪ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು.

ಇದರಿಂದ ಕೋಪಗೊಂಡ ಸಂಸದರು ಆಯ್ತು ನೋಡ್ಕೋ ಹೋಗ್ ಎಂದು ಎಡಗೈಯಿಂದ ಗ್ರಾಮಸ್ಥ ಶೇಖರಪ್ಪನನ್ನು ತಳ್ಳಿದ್ದಾರೆ. ಗ್ರಾಮಸ್ಥನನ್ನು ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಸದರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಸಂಬಂಧ ರಾಜ್ಯ ಕಾಂಗ್ರೆಸ್ ವಿಡಿಯೋ ಟ್ವೀಟ್ ಮಾಡಿದ್ದು, ''ಪ್ರಜೆಗಳ ಕಷ್ಟನಷ್ಟ ಆಲಿಸುವುದು, ಸ್ಪಂದಿಸುವುದೇ ಪ್ರಜಾಪ್ರತಿನಿಧಿಯ ಕರ್ತವ್ಯ. ಆದರೆ ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ. ಕಷ್ಟ ಹೇಳಿಕೊಂಡು ಬಂದ ರೈತನನ್ನು ದ್ರಾಸ್ಟ್ಯಾದಿಂದ ತಳ್ಳಿದ್ದಾರೆ. ಸರ್ವಾಧಿಕಾರವೇ ಅವರ ಪಕ್ಷದ ಸಿದ್ದಾಂತವೆಂದು ಸಂಸದ ಶಿವಕುಮಾರ್ ಉದಾಸಿ ನಿರೂಪಿಸಿದ್ದಾರೆ. #ShameOnYouBJP'' ಎಂದು ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News