ಒಕ್ಕಲಿಗ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು: ಡಿಸಿಎಂ ಅಶ್ವತ್ಥ ನಾರಾಯಣ

Update: 2020-11-24 14:30 GMT

ಬೆಳಗಾವಿ, ನ.24: ರಾಜ್ಯದಲ್ಲಿ ಒಕ್ಕಲಿಗ ಅಭಿವೃದ್ಧಿ ಮಂಡಳಿ ಕೂಡ ಆಗಲೇಬೇಕು ಎಂಬುದು ನನ್ನ ಒತ್ತಾಯ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರಕಾರವು ಬೇಡಿಕೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಒಕ್ಕಲಿಗ ಅಭಿವೃದ್ಧಿ ಮಂಡಳಿಯ ಅಗತ್ಯವಿದೆ. ಹೀಗಾಗಿ, ಮುಖ್ಯಮಂತ್ರಿಯು ಅದಕ್ಕೂ ಆದ್ಯತೆ ನೀಡಬೇಕು ಹಾಗೂ ಶೀಘ್ರದಲ್ಲಿಯೇ ಒಕ್ಕಲಿಗ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡಲೇಬೇಕಿತ್ತು. ಹಲವು ವರ್ಷಗಳಿಂದ ಈ ಬೇಡಿಕೆ ಇತ್ತು. ಮರಾಠಿಗರು ನಮ್ಮವರೇ. ನಮ್ಮ ರಾಜ್ಯದಲ್ಲೇ ನೆಲೆಸಿದ್ದಾರೆ. ಹೀಗಾಗಿ ಅವರ ಅಭಿವೃದ್ಧಿಗಾಗಿ ಸಹಕರಿಸುವುದರಲ್ಲಿ ತಪ್ಪೇನಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸಮರ್ಥಿಸಿಕೊಂಡರು.

ರಜೆಗಳ ಕಡಿತ: ರಾಜ್ಯಾದ್ಯಂತ ಈಗಾಗಲೇ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಹಲವು ಸವಾಲು, ಸಮಸ್ಯೆಗಳ ಎದುರಾಗುತ್ತಿದೆ. ಆದರೂ, ಆಫ್‍ಲೈನ್ ಹಾಗೂ ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದಂತೆ ಶೈಕ್ಷಣಿಕ ಅಭಿವೃದ್ಧಿಯಾಗುತ್ತಿದೆ. ಕೊರೋನ ಸೋಂಕು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಸಾಕಷ್ಟು ಸುರಕ್ಷತೆಯನ್ನು ಕೈಗೊಳ್ಳಲಾಗಿದೆ. ದಿನೇ ದಿನೇ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಂಡಿದ್ದು, ಕಾಲೇಜು ತಡವಾಗಿ ಆರಂಭವಾಗಿವೆ. ಸೆಮಿಸ್ಟರ್ ಪರೀಕ್ಷೆಗಳು ಕೂಡ ಲೇಟ್ ಆಗಲಿವೆ. ರಜೆ ಕಡಿತ ಮಾಡಿ ತರಗತಿಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಸಿಎಂ ಬದಲಾವಣೆ ಇಲ್ಲ: ಮುಖ್ಯಮಂತ್ರಿ ಬದಲಿಸುವ ಸಂಬಂಧ ಕೆಲವರು ಹೇಳಿಕೆ ನೀಡಿದ್ದಾರೆ. ಆದರೆ, ಪಕ್ಷದ ಎದುರು ಮುಖ್ಯಮಂತ್ರಿ ಬದಲಿಸುವ ಯಾವುದೇ ಪ್ರಸ್ತಾವನೆಯಿಲ್ಲ. ಸುಭದ್ರ ಸರಕಾರ ನಡೆಸಲು ಯಡಿಯೂರಪ್ಪ ಮುಂದುವರಿಯಲಿದ್ದಾರೆ. ಸಿಎಂ ಬದಲಾವಣೆ ಕುರಿತು ವದಂತಿಗಳು ಬರುತ್ತಿವೆ. ಅಂಥವರ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಎಚ್ಚರಿಕೆ ರವಾನಿಸಿದರು.

ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗಲಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಸಿಪಿ ಯೋಗೀಶ್ವರ್ ಕೂಡ ಮಂತ್ರಿ ಆಗಬೇಕು. ನಾನು ಮೊದಲಿಂದಲೂ ಅವರು ಮಂತ್ರಿ ಆಗಬೇಕು ಎಂದು ಹೇಳುತ್ತಲೇ ಬಂದಿದ್ದೇನೆ. ಸರಕಾರ ರಚನೆಯಲ್ಲಿ ಅವರ ಪಾತ್ರವೂ ಬಹುಮುಖ್ಯ ಎಂದು ತಿಳಿಸಿದರು.

ಮುಖ್ಯಮಂತ್ರಿಗೆ ನಿಯೋಗದಿಂದ ಮನವಿ: ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸುವಂತೆ ಒತ್ತಾಯಿಸಿ ಸಿಎಂ ಯಡಿಯೂರಪ್ಪ ಮತ್ತು ಸಚಿವ ಆರ್.ಅಶೋಕ್‍ಗೆ ವಿಧಾನಸೌಧದಲ್ಲಿ ಒಕ್ಕಲಿಗ ಸಮುದಾಯದ ನಿಯೋಗ ಮನವಿ ಸಲ್ಲಿಸಿತು. ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಎ.ಎಚ್.ಆನಂದ್, ಕೆ.ಗಂಗಹನುಮಯ್ಯ, ಎನ್.ವೇಣುಗೋಪಾಲ್, ಬಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಜೀವರಾಜ್, ಎಸ್.ಆರ್.ವಿಶ್ವನಾಥ್ ನಿಯೋಗದಲ್ಲಿದ್ದರು.

ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಸಮುದಾಯ ನಮ್ಮದು. 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಮುದಾಯ. ಒಕ್ಕಲುತನವನ್ನೇ ನಂಬಿಕೊಂಡಿರುವ ಜನಾಂಗ, ಶೇ. 65ರಷ್ಟು ಆದಾಯವನ್ನು ಸರಕಾರಕ್ಕೆ ನೀಡುತ್ತಿದೆ. ನಮ್ಮ ಸಮುದಾಯದಲ್ಲೂ ಬಡವರಿದ್ದಾರೆ. ಹೀಗಾಗಿ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಎಂದು ಸಿಎಂಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News