ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ: ಸಚಿವ ಪ್ರಭು ಚೌಹಾಣ್

Update: 2020-11-24 14:58 GMT

ಬೆಂಗಳೂರು, ನ.24: ಪಶುಸಂಗೋಪನೆ ಇಲಾಖೆಯ ಜವಾಬ್ದಾರಿ ನೀಡಿದ ದಿನದಿಂದ ಮನಸ್ಸಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮಹದಾಸೆ ಇತ್ತು. ಅದು ಈಗ ಕೈಗೂಡುವ ಸಮಯ ಹತ್ತಿರವಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗಿದ್ದು, ಡಿಸೆಂಬರ್ 7ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದು, ಅದಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಅವರು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಗೊಂಡ ಕಾಯ್ದೆಯ ಅಧ್ಯಯನ ನಡೆಸಲಾಗಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಪರಿಣಿತರೊಂದಿಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಗೋಹತ್ಯೆ ನಿಷೇಧ ಕಾಯ್ದೆ ಹೆಚ್ಚು ಬಲವಾಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಗೋಹತ್ಯೆ ನಿಷೇಧವಾಗಲಿದ್ದು ರಾಜ್ಯದ ಒಳಗೂ ಮತ್ತು ಹೊರಗೂ ಗೋಮಾಂಸ ಆಮದು ಮತ್ತು ರಫ್ತು ಸಂಪೂರ್ಣ ನಿಷೇಧ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

2010ರಲ್ಲಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ 1964 ಬದಲಾಗಿ, ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010ನ್ನು ಅಂದಿನ ನಮ್ಮ ಸರಕಾರದ ಅವಧಿಯಲ್ಲಿ ವಿಧಾನಮಂಡಲದಲ್ಲಿ ಮಂಡಿಸಿದ ನಂತರ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಅಂದು ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಇದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದ್ದರಿಂದ ಕಾಯ್ದೆಯ ಅನುಷ್ಠಾನದಲ್ಲಿ ವಿಳಂಬವಾಯಿತು. ಅಲ್ಲದೆ ಕೇಂದ್ರ ಗೃಹ ಇಲಾಖೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರಿಸಿತು. ಸದ್ಯ ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದು ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಗೋ ಹತ್ಯೆ ಪ್ರತಿ ಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಹಾಗೂ ನಿಯಮ 1967ರಲ್ಲಿ ಗೋವುಗಳು ಅಥವಾ ಎಮ್ಮೆ ಕರುಗಳು ವಧೆ/ಹತ್ಯೆಗೆ ನಿಷೇಧವಿದೆ. ಇತರೆ ಜಾನುವಾರು ಹೋರಿ, ಎತ್ತು, ಎಮ್ಮೆ, 12 ವರ್ಷಕ್ಕಿಂತ ಹೆಚ್ಚು ವಯಸ್ಸಾದಲ್ಲಿ, ಸಂವರ್ಧನೆಗೆ, ಭಾರ ಎಳೆಯಲು, ತೀವ್ರ ಕಾಯಿಲೆ, ಹಾಲು ಉತ್ಪಾದನೆಗೆ, ಅಥವಾ ಇನ್ನಾವುದೇ ಕಾರಣದಿಂದ ಅಸಮರ್ಥವಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದುಕೊಳ್ಳದ ಹೊರತು ವಧೆ ನಿಷೇಧವಿದೆ ಎಂದು ಅವರು ವಿವರಿಸಿದ್ದಾರೆ.

ಈ ಕಾಯ್ದೆ ಜಾರಿಗೆ ಬಂದರೆ ಜಾನುವಾರುಗಳ ವಧೆಗೆ ನಿಷೇಧ, ಗೋಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ, ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರಗಳ ಅಕ್ರಮ ಸಾಗಾಣಿಕೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ. ಅಲ್ಲದೇ ಬೇರೆ ರಾಜ್ಯಗಳಲ್ಲಿ ಅನುಷ್ಠಾನವಾಗಿರುವ ಕಾಯ್ದೆಯನ್ನು ಅವಲೋಕಿಸಿ ಗೋ ಮಾತೆಯ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.

ಈಗಾಗಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಅದರ ಅಡಿಯಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯನ್ನು ತಡೆಯಬಹುದಾಗಿದ್ದು. ಗೋವಂಶ ಹತ್ಯೆ, ಗೋವುಗಳ ಅಕ್ರಮ ಸಾಗಾಟ, ಹಿಂಸೆ ತಡೆಯುವ ಬಗ್ಗೆ ಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ದೇಶದಲ್ಲಿ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಅನುಷ್ಠಾನ ಜಾರಿಗೆ ತಂದಿದ್ದು ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಹೇರಿದ ರಾಜ್ಯಗಳು: ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ, ಚಂಡೀಗಡ, ಛತ್ತೀಸಗಡ, ದಿಲ್ಲಿ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂದು ಪ್ರಭು ಚೌಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News