ನಾಲ್ಕು ವಾರಗಳಲ್ಲಿ ಕೊರೋನ ಸೋಂಕಿಗೆ ಲಸಿಕೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-11-24 16:10 GMT

ಮೈಸೂರು,ನ.24: ಇನ್ನು ನಾಲ್ಕು ವಾರದಲ್ಲಿ ಕೊರೋನಗೆ ಲಸಿಕೆ ಬರಬಹುದು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ ಅಂತ ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು. 

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಂದು ಪ್ರಧಾನಿ ಮೋದಿ ಹಲವು ರಾಜ್ಯಗಳ ಸಿಎಂ ಸಭೆ ಕರೆದಿದ್ದರು. ಕೊರೋನ ಲಸಿಕೆ ವಿಚಾರವಾಗಿಯೇ ಕರೆದಿದ್ದ ಸಭೆ ಅದು. ಸಭೆಯಲ್ಲಿ ಕೊರೋನ ಲಸಿಕೆ ನಾಲ್ಕು ವಾರದೊಳಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದರು ಎಂದರು. ನಾವು ಸಹ ಜಿಲ್ಲಾ ಮಟ್ಟದಲ್ಲಿ ಲಸಿಕೆ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ತಯಾರಿ ನಡೆದಿದೆ ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಗಳ ಜೊತೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗಮಿಸಿದರು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪುಷ್ಪಗುಚ್ಛ ನೀಡುವ ಮೂಲಕ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News