ಬಂದ್ ಕೈಬಿಡಲು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಮನವಿ

Update: 2020-11-24 16:34 GMT

ಬೆಂಗಳೂರು, ನ.24: ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ, ರಾಜ್ಯದಲ್ಲಿ ಹುಟ್ಟಿ, ಬೆಳೆದು, ಇಲ್ಲಿನ ನೆಲ, ಜಲ, ಭಾಷೆ, ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿರುವ ನಾವು ಕನ್ನಡಿಗರು. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಿರುವ ಬಂದ್ ಕೈಬಿಡಿ. ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳೋಣ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್.ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದ್ದಾರೆ.

ನಗರದಲ್ಲಿ ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮರಾಠರು ದೇಶದ ನಾಲ್ಕನೇ ಅತಿ ದೊಡ್ಡ ಜನಾಂಗ. ಕರ್ನಾಟಕದಲ್ಲಿ ಆರನೇ ದೊಡ್ಡ ಜನಸಂಖ್ಯೆ ಹೊಂದಿದೆ. ಚಾಮರಾಜನಗರದಿಂದ ಬೀದರ್ ವರೆಗೆ, ಪೂರ್ವದ ಬಳ್ಳಾರಿಯಿಂದ ಉತ್ತರ ಕನ್ನಡದ ಗೋಕರ್ಣದವರೆಗೆ 50 ಲಕ್ಷಕ್ಕೂ ಹೆಚ್ಚು ಜನ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ ಎಂದರು.

32 ಕ್ಷತ್ರೀಯ ಪಂಗಡಗಳಾಗಿ ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಶತಶತಮಾನಗಳಿಂದ ಅಪ್ಪಟ ಕನ್ನಡಿಗರಾಗಿ ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಹೋರಾಟಕ್ಕೆ ಮರಾಠ ಮುಖಂಡರು ಕೈಜೋಡಿಸಿ ಸಹಿ ಮಾಡಿದ್ದಾರೆ ಎಂದು ಶ್ಯಾಮಸುಂದರ್ ಗಾಯಕ್ವಾಡ್ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿರುವಂತೆ ಮರಾಠ ಎಂದರೆ ಭಾಷೆಯಲ್ಲ ಜನಾಂಗ ಎಂಬುದು ಅಕ್ಷರಶಃ ಸತ್ಯ. ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವುದು ಸರಿಯಲ್ಲ. ಮರಾಠ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ಬೆಳಗಾವಿ, ಕಾರವಾರ, ನಿಪ್ಪಾಣಿಯ ಒಂದು ಇಂಚು ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ  ಅಖಂಡ ಕರ್ನಾಟಕವಾಗಬೇಕಾದರೆ ಸೋಲಾಪುರ ಹಾಗೂ ಕೊಲ್ಲಾಪುರವನ್ನು ಕರ್ನಾಟಕಕ್ಕೆ ಪಡೆಯಬೇಕು ಎಂಬ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಜನಿಸಿರುವ ನಾವು ಅಪ್ಪಟ ಕನ್ನಡಿಗರು. ಬದುಕುವುದಕ್ಕಾಗಿ ಹಾಗೂ ರಕ್ಷಿಸಿಕೊಳ್ಳುವುದಕ್ಕಾಗಿ ನಾವು ಕನ್ನಡ ಧ್ವಜ ಹಿಡಿದವರಲ್ಲ. ನಮ್ಮ ಉಸಿರು, ನಮ್ಮ ಪ್ರಾಣ, ನಮ್ಮ ಅನ್ನ, ನಮ್ಮ ನೆಲ ಶತಶತಮಾನಗಳಿಂದ ನಾವುಗಳು ನೆಲೆಸಿರುವುದು ಕನ್ನಡ ನೆಲದಲ್ಲೇ. ನಾವೇನು ವಲಸೆ ಬಂದವರಲ್ಲ. ಆದರೆ ಗಡಿ ಭಾಗದ ಕೆಲ ಪುಂಡ ಮರಾಠಿಗರಿಗೆ ಕ್ಯಾತೆ ತೆಗೆಯುವುದೇ ಕೆಲಸವಾಗಿದೆ. ಅವರು ಮಾಡಿದ ತಪ್ಪಿಗಾಗಿ ಇಡೀ ಮರಾಠ ಸಮುದಾಯವನ್ನು ದೂಷಿಸುವುದು ಸರ್ವಥಾ ಸರಿಯಲ್ಲ ಎಂದು ಅವರು ತಿಳಿಸಿದರು.

ಕನ್ನಡ ಚಳವಳಿಯ ನಾಯಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಅಪ್ಪಟ ಕನ್ನಡಿಗರಾದ ನಮಗೆ ಕೆಟ್ಟ ಹಣೆಪಟ್ಟಿಯನ್ನು ಕಟ್ಟಬೇಡಿ. ಈ ರಾಜ್ಯದ 50 ಲಕ್ಷಕ್ಕೂ ಹೆಚ್ಚು ಇರುವ ಮರಾಠರು ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಹೋರಾಟಕ್ಕೆ ಕನ್ನಡದ ಏಳಿಗೆಗಾಗಿ ಹಗಲಿರುಳು ನಿಮ್ಮ ಜೊತೆಯಲ್ಲಿ ಇದ್ದೇವೆ, ಇರುತ್ತೇವೆ. ಇದನ್ನು ತಾವು ಅರಿತು ಮರಾಠ ಸಮಾಜವನ್ನು ವಿರೋಧ ಮಾಡಬೇಡಿ ಅಣ್ಣ-ತಮ್ಮಂದಿರಂತೆ ಬಾಳೋಣ ಒಬ್ಬರಿಗೆ-ಒಬ್ಬರು ಸಹಾಯ ಹಸ್ತ ನೀಡೋಣ ಎಂದು ಅವರು ಮನವಿ ಮಾಡಿದರು.

ಮರಾಠ ಜನಾಂಗವನ್ನು 3 ಬಿಯಿಂದ 2 ಎಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿ ಎಂದು ಮನವಿ ಮಾಡಿದ್ದು, ನಮ್ಮ ಬೇಡಿಕೆ ಈಡೇರಿಲ್ಲ. ಕಡುಬಡವರಾಗಿರುವ ನಾವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಹಳ ಹಿಂದೆ ಇದ್ದೇವೆ. ಇದನ್ನೆಲ್ಲ ಅರಿತ ಯಡಿಯೂರಪ್ಪನವರು ಮರಾಠ ಸಮುದಾಯ ಅಭಿವೃದ್ಧಿ ನಿಗಮ ರಚಿಸಿರುತ್ತಾರೆ. ಇದಕ್ಕೆ ರಾಜ್ಯದ ಮರಾಠ ಜನತೆ ಚಿರಋಣಿಯಾಗಿದ್ದೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಡಿ.ಘೋರ್ಪಡೆ, ಜಂಟಿ ಕಾರ್ಯದರ್ಶಿ ವಿನೂತ್ ಕುಮಾರ್, ಉಪಾಧ್ಯಕ್ಷರಾದ ಶಂಕರ್ ರಾವ್ ಚೌವ್ಹಾಣ್, ಶ್ರೀಧರ್ ರಾವ್ ಶಿಂಧೆ, ಲಕ್ಷ್ಮಣ ರಾವ್ ಚೌವ್ಹಾಣ್, ಬೆಂಗಳೂರು ನಗರದ ಜಿಲ್ಲಾಧ್ಯಕ್ಷ ರವಿಶಂಕರ್, ಧಾರವಾಡ ಜಿಲ್ಲಾಧ್ಯಕ್ಷ ಪ್ರಕಾಶ್ ಚೌವ್ಹಾಣ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಮೇಶ್ ರಾವ್, ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕುಮಾರ್ ಗೋವಿಂದ್ ಗಾಯಕ್ ವಾಡ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News